ಗೌರಿ ಲಂಕೇಶ್ ಶಂಕಿತ ಹಂತಕರ ಹಿಟ್‌ಲಿಸ್ಟ್‌ನಲ್ಲಿ ಕಾರ್ನಾಡ್ ಹೆಸರು

Update: 2018-06-13 17:49 GMT

ಬೆಂಗಳೂರು,ಜೂ.13: ಖ್ಯಾತ ಸಾಹಿತಿ, ನಟ ಹಾಗೂ ರಂಗಕರ್ಮಿ ಗಿರೀಶ ಕಾರ್ನಾಡ್ ಮತ್ತು ಇತರ ಹಲವಾರು ಸಾಹಿತಿಗಳು ಮತ್ತು ವಿಚಾರವಾದಿಗಳು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಶಂಕಿತ ಹಂತಕರ ಹಿಟ್ ಲಿಸ್ಟ್‌ನಲ್ಲಿದ್ದರು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡ(ಸಿಟ್)ವು ಶಂಕಿತರ ಬಳಿಯಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿ ಹಿಂದಿಯಲ್ಲಿ ಟಿಪ್ಪಣಿಗಳಿದ್ದು, ಕಟ್ಟರ್ ಹಿಂದುತ್ವದ ವಿರುದ್ಧ ತಮ್ಮ ತೀಕ್ಷ್ಣ ಅಭಿಪ್ರಾಯಗಳಿಗೆ ಹೆಸರಾಗಿರುವ ಗಣ್ಯರ ಹೆಸರುಗಳನ್ನು ಹೊಂದಿದೆ.

ಕಾರ್ನಾಡ್ ಜೊತೆಗೆ ಸಾಹಿತಿ-ರಾಜಕಾರಣಿ ಬಿ.ಟಿ.ಲಲಿತಾ ನಾಯ್ಕ್, ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿ ಮತ್ತು ವಿಚಾರವಾದಿ ಸಿ.ಎಸ್.ದ್ವಾರಕಾನಾಥ ಅವರ ಹೆಸರುಗಳೂ ಹಿಟ್‌ ಲಿಸ್ಟ್‌ನಲ್ಲಿವೆ ಎಂದು ಸಿಟ್‌ ಮೂಲಗಳು ತಿಳಿಸಿವೆ. ಕೆಲವು ಟಿಪ್ಪಣಿಗಳು ಗೂಢಲಿಪಿಯಲ್ಲಿದ್ದು, ಅವುಗಳನ್ನು ಭೇದಿಸಲು ಪ್ರಯತ್ನಿಸಲಾಗುತ್ತಿದೆ ಎಂದವು.

ಪರಶುರಾಮ ವಾಗ್ಮೋರೆಯನ್ನು ವಿಜಯಪುರ ಜಿಲ್ಲೆಯ ಸಿಂದಗಿಯಿಂದ ಬಂಧಿಸಲಾಗಿದ್ದು, ಹತ್ಯೆ ಸಂಚಿನಲ್ಲಿ ಆತನ ಪಾತ್ರ ಮತ್ತು ಇತರ ವಿವರಗಳನ್ನು ಈಗ ಬಹಿರಂಗಗೊಳಿಸಿದರೆ ತನಿಖೆಗೆ ತೊಡಕಾಗಲಿದೆ ಎಂದು ಸಿಟ್ ಮಂಗಳವಾರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News