ಚಿಕ್ಕಮಗಳೂರು: ಏಕಕಾಲದಲ್ಲಿ ವಿಧಾನ ಪರಿಷತ್ ಪ್ರವೇಶಿಸಿದ ಸಹೋದರರು

Update: 2018-06-13 17:53 GMT

ಚಿಕ್ಕಮಗಳೂರು, ಜೂ.13: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗದ ಜೆಡಿಎಸ್ ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದಾಗಿ ಮತ್ತೆ ಪುಟಿದೆದ್ದಿದ್ದು, ಜಿಲ್ಲೆಯ ಪ್ರಭಾವಿ ಜೆಡಿಎಸ್ ಮುಖಂಡರು ಹಾಗೂ ಸಹೋದರರಾದ ಎಸ್.ಎಲ್.ಧರ್ಮೇಗೌಡ ಮತ್ತು ಎಸ್.ಎಲ್. ಭೋಜೇಗೌಡ  ಅವರು ವಿಧಾನ ಪರಿಷತ್ ಸದಸ್ಯರಾಗುವುದರೊಂದಿಗೆ ಜಿಲ್ಲೆಯ ಜೆಡಿಎಸ್‍ನ ರಾಜಕೀಯದಲ್ಲಿ ಹೊಸ ಭಾಷ್ಯ ಬರೆದಿದ್ದು, ಒಮ್ಮೆಗೆ ಈ ಸಹೋದರರು ಎಮ್ಮೆಲ್ಸಿಗಳಾಗಿ ಆಯೆಯಾಗುವ ಮೂಲ ಐತಿಹಾಸಿಕ ಸಾಧನೆ ಮಾಡಿದ್ದಾರೆ. 

ಬೀರೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಸ್.ಆರ್. ಲಕ್ಷ್ಮಯ್ಯರವರ ಪುತ್ರರಾದ ಎಸ್.ಎಲ್.ಧರ್ಮೇಗೌಡ ಮತ್ತು ಎಸ್.ಎಲ್.ಭೋಜೇಗೌಡ ಸಹೋದರ ಹೆಸರು ಜಿಲ್ಲೆಯ ರಾಜಕಾರಣದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ವಾಶ್‍ಔಟ್‍ನ ಕಪ್ಪುಚುಕ್ಕಿಗೆ ಗುರಿಯಾಗಿತ್ತು. ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಭವಿಷ್ಯದಲ್ಲಿ ತೀರಾ ಕಷ್ಟ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ, ಅನಿರೀಕ್ಷಿತ ಎಂಬಂತೆ ಬೀರೂರೂ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಧರ್ಮೇಗೌಡ ವಿಧಾನಪರಿಷತ್‍ಗೆ ಅವಿರೋಧವಾಗಿ ಆಯ್ಕೆಯಾಗು ಮೂಲಕ ವಿರೋಧಿ ಪಕ್ಷಗಳ ಮುಖಂಡರು ಹುಬ್ಬೇರಿಸುವಂತೆ ಮಾಡಿದ್ದರು.

ನಂತರ ನಡೆದ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಧರ್ಮೇಗೌಡ ಅವರ ಅಣ್ಣ ಭೋಜೇಗೌಡ ಗೆಲುವು ಅಸಾಧ್ಯ, ಈ ಕ್ಷೇತ್ರದಿಂದ ಸತತ ಗೆಲುವು ಕಾಣುತ್ತಿದ್ದ ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರೇ ಮತ್ತೆ ಗೆಲ್ಲಲಿದ್ದಾರೆಂಬ ಮಾತು ಕ್ಷೇತ್ರದಾದ್ಯಂತ ಕೇಳಿ ಬಂದಿತ್ತು. ಆದರೆ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಭೋಜೇಗೌಡ ಗೆಲುವು ಸಾಧಿಸಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. 

ಇಬ್ಬರು ಸಹೋದರರು ವಿಧಾನ ಪರಿಷತ್ ಪ್ರವೇಶಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾರೆ. ಎಸ್.ಎಲ್. ಧರ್ಮೇಗೌಡ ಕಳೆದ ಹತ್ತು ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆಯಾಗಿದ್ದರು. ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಬಿಜೆಪಿ ಅಭ್ಯರ್ಥಿ ಗಣೇಶ್ ಕಾರ್ಣಿಕ್ ವಿರುದ್ದ 2837ಕ್ಕೂ ಹೆಚ್ಚು ಮತ ಪಡೆದು ಜಯಬೇರಿ ಬಾರಿಸಿರುವ ಭೋಜೇಗೌಡ ಸಹೋದರರು ಏಕ ಕಾಲದಲ್ಲಿ ವಿಧಾನ ಪರಿಷತ್ ಸದಸ್ಯರಾಗುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಎಸ್.ಎಲ್. ಧರ್ಮೇಗೌಡ 2004ರಲ್ಲಿ ತಂದೆ ಪ್ರತಿನಿಧಿಸಿದ್ದ ಬೀರೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಬೀರೂರು ವಿಧಾನಸಭಾ ಕ್ಷೇತ್ರ, ಕ್ಷೇತ್ರ ವಿಂಗಡಣೆಯಲ್ಲಿ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ವಿಲೀನಗೊಂಡಿದ್ದರಿಂದ ಸ್ಪರ್ಧಿಸಿದ ಕ್ಷೇತ್ರ ಕಳಕೊಂಡ ನಂತರ ಚಿಕ್ಕಮಗಳೂರು ಕ್ಷೇತ್ರವನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡು, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಫರ್ಧಿಸಿ ವಿಫಲರಾಗಿದ್ದರು. ಸೋಲಿನ ಕಹಿ ಅನುಭವದ ನಂತರವು ದೃತಿಗೆಡದೆ ಜೆಡಿಎಸ್ ಪಕ್ಷದಲ್ಲಿ ದುಡಿದು, ಜಿಲ್ಲಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಛಲ ಬಿಡದ ಅಣ್ಣತಮ್ಮಂದಿರು ನಿರಂತರ ಜನರ ಸಂಪರ್ಕದೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

ಸಹೋದರಿಬ್ಬರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಅತ್ಯಂತ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡ ದಿ.ಎಸ್.ಆರ್.ಲಕ್ಷ್ಮಯ್ಯರವರ ಕುಟುಂಬದಿಂದ ಬಂದ ಸಹೋದರರು ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಲ್ಲಿ ಇಬ್ಬರೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದು ಅಭಿವೃದ್ಧಿಯ ಕನಸ್ಸು ಕಾಣುತ್ತಿದ್ದ ಜನತೆಯಲ್ಲಿ ಮಂದಹಾಸ ಮೂಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News