ಚಿಕ್ಕಮಗಳೂರು: ಎಸ್.ಕೆ.ಬಾರ್ಡರ್- ನೆಮ್ಮಾರ್ ಬಳಿ ರಸ್ತೆ ಸಂಚಾರ ಸ್ಥಗಿತ
ಮಂಗಳೂರು, ಜೂ.14: ಚಿಕ್ಕಮಗಳೂರಿನಿಂದ ಮಂಗಳೂರನ್ನು ಸಂಪರ್ಕಿಸುವ ಎಸ್.ಕೆ. ಬಾರ್ಡರ್ ಹಾಗೂ ನೆಮ್ಮಾರ್ ಬಳಿಯ ರಸ್ತೆಯ ಬಳಿ ತುಂಗಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಈ ರಸ್ತೆ ಸಂಪರ್ಕವನ್ನು ಕಡಿದುಕೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಇಂದು ಮಧ್ಯಾಹ್ನದ ವೇಳೆ ಈ ರಸ್ತೆಯಲ್ಲಿ ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಆಗಮಿಸುತ್ತಿದ್ದ ಬಸ್ಸು ಸೇರಿ ಸುಮಾರು 50ಕ್ಕೂ ಅಧಿಕ ವಾಹನಗಳು ಸಿಲುಕಿಹಾಕಿಕೊಂಡಿತ್ತು. ದಾವಣಗೆರೆಯಿಂದ ನಿನ್ನೆ ಮಂಗಳೂರಿಗೆ ಹೊರಟಿದ್ದ ದುರ್ಗಾಂಬ ಬಸ್ ಕೂಡಾ ಇದೇ ರಸ್ತೆ ಮಧ್ಯೆ ಸಿಲುಕಿ ಹಾಕಿಕೊಂಡಿದ್ದು. ಬಸ್ಸಿನ ಮಂಗಳೂರು ನಿವಾರ್ಹಕರಿಗೆ ಬಸ್ಸಿನ ಸಂಪರ್ಕ ಸಿಗದ ಬಗ್ಗೆ ಆತಂಕ ಸೃಷ್ಟಿಯಾಗಿತ್ತು.
ಈ ಸಂದರ್ಭ, ಪೊಲೀಸರು ಮತ್ತು ಮಾಧ್ಯಮ ಗುಂಪಿನ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಬಗ್ಗೆ ಮಾಹಿತಿ ಕೋರಿದಾಗ, ತಕ್ಷಣ ಪ್ರತಿಕ್ರಿಯಿಸಿದ ಎಸ್ಪಿ ಅಣ್ಣಾ ಮಲೈ, ಬಸ್ಸು ಎಸ್.ಕೆ.ಬಾರ್ಡರ್ ಹಾಗೂ ನೆಮ್ಮಾರ್ ರಸ್ತೆಯ ಬಳಿ ಸಿಲುಕಿರುವುದನ್ನು ದೃಢಪಡಿಸಿದರಲ್ಲದೆ, ಬಸ್ಸಿನ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಮಾತ್ರವಲ್ಲದೆ, ಅಲ್ಲಿನ ಸ್ಥಳೀಯ ಪೊಲೀಸರು ಹಾಗೂ ತಹಶೀಲ್ದಾರರ ನೇತೃತ್ವದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆಯನ್ನೂ ಮಾಡಿರುವುದಾಗಿ ಅಣ್ಣಾ ಮಲೈ ತಿಳಿಸಿದ್ದಾರೆ. ಇದೇ ವೇಳೆ ಶೃಂಗೇರಿ ಹೆದ್ದಾರಿ 169ರ ಮುರುವಿನ ಕೊಂಬೆ ಸಮೀಪ ರಸ್ತೆ ಮೇಲೆ ಮಣ್ಣು ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ನದಿ ನೀರು ಶೃಂಗೇರಿ ದೇವಾಲಯದ ಮೆಟ್ಟಿಲವರೆಗೂ ತಲುಪಿತ್ತು. ಸದ್ಯ ಪರಿಸ್ಥಿತಿ ಸುರಕ್ಷಿತ ಎಂದು ಎಸ್ಪಿ ಅಣ್ಣಾ ಮಲೈ ಸ್ಪಷ್ಟಪಡಿಸಿದ್ದಾರೆ.