ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಸಮರ್ಥ ನಾಯಕ: ಮಾಜಿ ಸಚಿವ ಎ.ಮಂಜು

Update: 2018-06-14 13:20 GMT

ಬೆಂಗಳೂರು, ಜೂ.14: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥ ನಾಯಕರೆಂದು ಮಾಜಿ ಸಚಿವ ಎ.ಮಂಜು ಅಭಿಪ್ರಾಯಿಸಿದರು.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನವನ್ನು ಪಡೆಯದೆ ಸಂಕಷ್ಟದಲ್ಲಿದೆ. ಹೀಗಾಗಿ 2019ರ ಲೋಕಸಭಾ ಚುನಾವಣೆಯ ಹಿತದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾತ್ಯತೀತ ಮೌಲ್ಯವುಳ್ಳ ಸಮರ್ಥ ನಾಯಕ ಆಯ್ಕೆಯಾಗುವ ಅಗತ್ಯವಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರು, ಶಾಸಕರು ಹಾಗೂ ಕಾರ್ಯಕರ್ತರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಿ ಪಕ್ಷವನ್ನು ಸಂಘಟಿಸುವ ಸಮರ್ಥ ಮತ್ತು ಜಾತ್ಯತೀತ ನಾಯಕನ ಅಗತ್ಯವಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಸೂಕ್ತವಾದ ವ್ಯಕ್ತಿಯೆಂದು ಕಾಂಗ್ರೆಸ್ ಕಾರ್ಯಕರ್ತರ ಒಟ್ಟಾರೆ ಅಭಿಪ್ರಾಯವಾಗಿದೆ. ಇವರನ್ನು ಹೊರತು ಪಡಿಸಿದಂತೆ ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು. ಆಗ ಮಾತ್ರವೇ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಪಡೆಯಲು ಸಾಧ್ಯ ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭೇಟಿ ಮಾಡಿ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಸ್ಥಳೀಯ ನಾಯಕರ ಅಭಿಪ್ರಾಯವನ್ನು ತಿಳಿಸಲಿದ್ದೇವೆ ಎಂದು ಅವರು ಹೇಳಿದರು.

2019ರ ಚುನಾವಣೆಗೆ ಬಿಜೆಪಿ ವಿರುದ್ಧ ಎಲ್ಲ ಪ್ರಾದೇಶಿಕ ಪಕ್ಷಗಳು ’ಮಹಾಘಟಬಂಧನ’ಕ್ಕೆ ಹಣಿಗೊಳ್ಳುತ್ತಿವೆ. ರಾಜ್ಯದಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ಸಂಘಟನೆಗೆ ಮುಂದಾಗಬೇಕಾಗಿದೆ. ಕಾಂಗ್ರೆಸ್ ಆಡಳಿತದಲ್ಲಿನ ಭಾಗ್ಯ ಯೋಜನೆಗಳು ಜನತೆಯನ್ನು ತಲುಪಿದ್ದರೂ, ಯೋಜನೆಗಳ ಲಾಭ ಪಡೆಯುವಲ್ಲಿ ವಿಫಲವಾಗಿದ್ದೇವೆ. ಹೀಗಾಗಿ, ಶೇ.38 ಜನಾದೇಶ ಸಿಕ್ಕರೂ 80ಕ್ಕೂ ಅಧಿಕ ಸ್ಥಾನಗಳು ಗೆಲಲ್ಲು ಸಾಧ್ಯವಾಗಿಲ್ಲ. ಶೇ.36 ಮತ ಪಡೆದ ಬಿಜೆಪಿ 104 ಸ್ಥಾನ ಪಡೆದಿದೆ. ಹೀಗಾಗಿ, ಕಾಂಗ್ರೆಸ್ ಸರಕಾರದ ಭಾಗ್ಯದ ಯೋಜನೆಗಳನ್ನು ಮುಂದುವರಿಸಿ ಮುಂದಿನ ಚುನಾವಣೆಯಲ್ಲಿ ಅವುಗಳ ಲಾಭ ಪಡೆಯಬೇಕು ಎಂದು ಅವರು ಆಶಿಸಿದರು.

ಮಲ್ಲಿಕಾರ್ಜುನ್ ಖರ್ಗೆ ರಾಷ್ಟ್ರ ಮಟ್ಟದ ನಾಯಕರಾಗಿದ್ದು, ರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ನಾನು ಹೇಳಲಾಗದು. ಅದು ಹೈಕಮಾಂಡ್‌ನ ತೀರ್ಮಾನಕ್ಕೆ ಬಿಟ್ಟದ್ದು.
-ಎ.ಮಂಜು, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News