ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳ ದುರಸ್ಥಿ ಕಾರ್ಯ ಶೀಘ್ರ: ಸಚಿವ ರಾಜಶೇಖರ ಪಾಟೀಲ
Update: 2018-06-14 19:39 IST
ಬೆಂಗಳೂರು, ಜೂ.14: ರಾಜ್ಯದಲ್ಲಿ ‘ಸಿ’ ಪ್ರವರ್ಗದ 34,212 ದೇವಾಲಯಗಳಿದ್ದು, ಬಹುತೇಕ ದೇವಾಲಯಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳ ದುರಸ್ಥಿ ಕಾರ್ಯವನ್ನು ಶೀಘ್ರವೇ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಬಿ.ಪಾಟೀಲ ತಿಳಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಿ ಪ್ರವರ್ಗದ ದೇವಾಲಯಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಸಂರಕ್ಷಣೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುವುದು. ಈ ನಿಟ್ಟಿನಲ್ಲಿ ದೇವಾಲಯಗಳ ನಿರ್ವಹಣೆಗಾಗಿ ಸಾಫ್ಟ್‌ವೇರ್ ತಯಾರಿಸಿ ದಾಖಲೆಗಳನ್ನು ಗಣಕೀಕೃತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 34556 ಅಧಿಸೂಚಿತ ದೇವಾಲಯಗಳಿದ್ದು, ಅದರ ಆದಾಯ ಕ್ರಮವಾಗಿ ಪ್ರವರ್ಗ ಎ, ಬಿ, ಸಿ ಎಂದು ವರ್ಗೀಕರಿಸಲಾಗಿದೆ. ‘ಎ’ ವರ್ಗದ ದೇವಾಲಯಗಳಿಂದ ಬಂದ ಆದಾಯವನ್ನು ಅನ್ಯ ಉದ್ದೇಶಗಳಿಗೆ ಬಳಸದೆ, ದೇವಸ್ಥಾನ ಹಾಗೂ ಅದರ ಸುತ್ತಮುತ್ತಲ ಪ್ರದೇಶದ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.