ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ: ಮಾಜಿ ಪ್ರಧಾನಿ ದೇವೇಗೌಡ
ಬೆಂಗಳೂರು, ಜೂ. 14: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಗುರುವಾರ ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾವು ಎಷ್ಟು ಸೀಟು ಗೆಲ್ಲುತ್ತೇವೆ ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ಜೊತೆ ಸೇರಿ ಬಿಜೆಪಿಯ ಹಿನ್ನಡೆಗೆ ನಾವು ಮುಂದಾಗಬೇಕು. ಬಿಜೆಪಿ ಸೋಲಿಸುವುದು ನಮ್ಮ ಗುರಿ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನಮ್ಮಲ್ಲಿರುವವರೇ ಕಾರಣ. ಆದಷ್ಟು ಬೇಗ ಅನ್ಯಾಯ ಮಾಡಿದವರನ್ನು ಪಕ್ಷದಿಂದ ಹೊರ ಹಾಕುವೆ ಎಂದ ಅವರು, ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ಹಾನಿಯಾಗಿದೆ. ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಜಿಲ್ಲಾಡಳಿತದಲ್ಲಿರುವ 5 ಕೋಟಿ ಹಣವನ್ನು ಬಳಕೆ ಮಾಡಲು ಸೂಚಿಸಲಾಗಿದೆ ಎಂದರು.
‘ವಿಧಾನಸಭಾ ಚುನಾವಣೆ ಉತ್ಸಾಹದಲ್ಲಿ ಒಂದೇ ದಿನದಲ್ಲಿ ರೈತರ ಸಾಲಮನ್ನಾ ಮಾಡ್ತೀವಿ’ ಎಂದು ಹೇಳಿದರು. ಆದರೆ, 37 ಸ್ಥಾನ ಪಡೆದು ಹೇಗೆ ಸಾಲಮನ್ನಾ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಮೈತ್ರಿಕೂಟ ಸರಕಾರದಲ್ಲಿ ಈ ಬಗ್ಗೆ ಚರ್ಚಿಸಿ ಸಾಲಮನ್ನಾಕ್ಕೆ ಕ್ರಮ ವಹಿಸಲಾಗುವುದು ಎಂದರು.
ಶೀಘ್ರ ನಿರ್ಧಾರ: ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ಬಗ್ಗೆ ಸಭೆ ನಡೆಸಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಿದ್ದಾರೆ. ಸಾಲಮನ್ನಾ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ದೇವೇಗೌಡ ಹೇಳಿದರು.