×
Ad

ದೇಶದಲ್ಲಿ ಏಕರೂಪ ಕೃಷಿ ನೀತಿ ಜಾರಿ ಅಗತ್ಯ: ಕೃಷಿ ಸಚಿವ ಶಿವಶಂಕರ ರೆಡ್ಡಿ

Update: 2018-06-14 19:46 IST

ಬೆಂಗಳೂರು, ಜೂ. 14: ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡಲು ಕೇಂದ್ರ ಸರಕಾರ ಏಕರೂಪದ ಕೃಷಿ ನೀತಿಯೊಂದನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಇಂದಿಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರನ್ನು ಸಂಕಷ್ಟದಿಂದ ಪಾರು ಮಾಡುವ ದೃಷ್ಟಿಯಿಂದ ಬೆಳೆ ಪದ್ಧತಿ ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವಂತಹ ಕೃಷಿ ನೀತಿ ಅಗತ್ಯವಿದೆ ಎಂದರು.

ರಾಜ್ಯದಲ್ಲಿ 8.60 ಲಕ್ಷ ಕ್ವಿಂಟಾಲ್ ಬಿತ್ತನೆಬೀಜದ ಬೇಡಿಕೆಯಿದ್ದು, ಸಮರ್ಪಕ ಬಿತ್ತನೆ ಬೀಜ ಪೂರೈಕೆಗೆ ಕ್ರಮ ವಹಿಸಲಾಗಿದೆ. ಅಲ್ಲದೆ, 21.87 ಲಕ್ಷ ಟನ್ ರಸಗೊಬ್ಬರ ಬೇಡಿಕೆಯಿದ್ದು, 7.31 ಲಕ್ಷ ಟನ್ ಪೂರೈಕೆ ಮಾಡಿದ್ದು, 6.21 ಲಕ್ಷ ಟನ್ ದಾಸ್ತಾನಿದೆ. ಡಿಎಪಿ ಕೊರತೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕಳೆದ ಮೂರು ತಿಂಗಳಲ್ಲಿ ಧಾರವಾಡ-10, ಬೆಳಗಾವಿ-9 ಹಾಗೂ ಹಾವೇರಿ-7 ಮಂದಿ ಸೇರಿ ರಾಜ್ಯದಲ್ಲಿ 69 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಪೈಕಿ ಕೆಲವರು ಸ್ವಾಭಾವಿಕವಾಗಿ ಆತ್ಮಹತ್ಯೆ ಮಾಡಿದ್ದಾರೆ. ಆದರೆ, ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದ ರೈತರಿಗೆ ಪರಿಶೀಲನೆ ಬಳಿಕ ತಲಾ 5ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಹೇಳಿದರು.

ರೈತರ ಸಾಲಮನ್ನಾ: ರಾಜ್ಯದಲ್ಲಿನ ರೈತರ ಸಾಲಮನ್ನಾಕ್ಕೆ ರೂಪರೇಷೆಗಳನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಮಂಡಿಸಲಿರುವ ಬಜೆಟ್‌ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಶಿವಶಂಕರ ರೆಡ್ಡಿ ಇದೇ ಸಂದರ್ಭದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News