ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಾಲ್ಕು ತಂಡಗಳ ನೇತೃತ್ವದಲ್ಲಿ ಕೃತ್ಯ?

Update: 2018-06-14 15:30 GMT

ಬೆಂಗಳೂರು, ಜೂ.14: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತ ಪ್ರಮುಖ ಆರೋಪಿ ಪರಶುರಾಮ್ ಬಂಧಿಸಿ, ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದು, ದುಷ್ಕರ್ಮಿಗಳು ನಾಲ್ಕು ತಂಡಗಳನ್ನು ರೂಪಿಸಿ, ಅದರ ನೇತೃತ್ವದಲ್ಲಿಯೇ ಕೃತ್ಯವೆಸಗಿರುವುದಾಗಿ ತಿಳಿದು ಬಂದಿದೆ ಎನ್ನಲಾಗಿದೆ.

ಕೃತ್ಯದ ಹಿಂದೆ ನಾಲ್ಕು ತಂಡಗಳ ಕೈವಾಡವಿದ್ದು, ದುಷ್ಕರ್ಮಿಗಳ ಮೊದಲನೇ ತಂಡ ಕೇವಲ ಗೌರಿ ಲಂಕೇಶ್ ದಿನನಿತ್ಯದ ಕೆಲಸಗಳ ಬಗ್ಗೆ ನಿಗಾವಹಿಸಿತ್ತು. ಜೊತೆಗೆ ಗೌರಿ ಲಂಕೇಶ್ ವಾರಪತ್ರಿಕೆಯ ಬರಹಗಳು, ಆಕೆ ಜನರನ್ನುದ್ದೇಶಿಸಿ ಮಾತನಾಡಿದ ವಿಡಿಯೋ, ಸಂಘಪರಿವಾರ, ಹಿಂದುತ್ವದ ವಿರುದ್ದ ನೀಡಿದ್ದ ಹೇಳಿಕೆಗಳು ಮತ್ತು ದಾಖಲೆಗಳ ಸಂಗ್ರಹ ಮಾಡಿದ ಬಳಿಕ, ಎರಡನೆಯ ತಂಡಕ್ಕೆ ರವಾನಿಸಿತ್ತು. 

ನಂತರ ಎರಡನೇ ತಂಡ ಈ ದಾಖಲೆಗಳ ಪರಾಮರ್ಶೆ ನಡೆಸಿ, ಅವುಗಳಿಗೆ ಮತ್ತೊಂದು ರೂಪ ನೀಡಿ, ಮೂರನೇ ತಂಡಕ್ಕೆ ರವಾನಿಸಿತ್ತು. ಮೂರನೇ ತಂಡ ಗೌರಿಯ ದಿನದ 24 ಗಂಟೆಯ ಚಲನವಲನಗಳನ್ನು ನೋಡಿಕೊಂಡಿತ್ತು.

ಪ್ರತಿದಿನ ಗೌರಿ ಲಂಕೇಶ್ ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ, ಯಾರ್ಯಾರನ್ನು ಭೇಟಿ ಮಾಡುತ್ತಾರೆ, ರಾತ್ರಿ ಮನೆಗೆ ಯಾವ ವೇಳೆಗೆ ವಾಪಸ್ಸು ಆಗುತ್ತಾರೆ? ಆಕೆ ಓಡಾಡುವ ವ್ಯಾಪ್ತಿಯಲ್ಲಿ ಸಿಸಿ ಟಿವಿಗಳು ಎಷ್ಟಿವೆ? ಜನದಟ್ಟಣೆ ಇದೆಯೆ ಎಂದೆಲ್ಲಾ ಮಾಹಿತಿ ಸಂಗ್ರಹಿಸಿ, ಲಿಖಿತ ರೂಪದಲ್ಲಿಯೇ ನಾಲ್ಕನೇ ತಂಡಕ್ಕೆ ರವಾನೆ ಮಾಡಿತ್ತು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊನೆ ಹಂತದ ಎಲ್ಲ ಮಾಹಿತಿ ಸಂಗ್ರಹಿಸಿದ ನಾಲ್ಕನೇ ತಂಡದ ಸದಸ್ಯರು, 2017ರ ಸೆಪ್ಟೆಂಬರ್ 5 ರಂದು ರಾತ್ರಿ ವೇಳೆ ಗೌರಿ ಲಂಕೇಶ್ ಅವರನ್ನು ರಾಜರಾಜೇಶ್ವರಿ ನಿವಾಸದ ಬಳಿಯೇ ಹತ್ಯೆಗೈದಿದ್ದರು. ಬಂಧಿತರಲ್ಲಿ ಇಬ್ಬರು, ನಾಲ್ಕನೇ ತಂಡದ ಸದಸ್ಯರಾಗಿರುವ ಶಂಕೆ ದಟ್ಟವಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಾಳೆ ಮೇಲೆ ಶಂಕೆ

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರದ ಪುಣೆಯ ಅಮೋಲ್ ಕಾಳೆ, ಹತ್ಯೆ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸಂಘಟನೆಯೊಂದು ಸುಪಾರಿ ನೀಡಿತ್ತು, ಸಂಘಟನೆ ನೀಡಿದ್ದ ಕೆಲಸವನ್ನು ನಿರ್ವಹಿಸಲು ಅಮೋಲ್ ಕಾಳೆ ಒಂದು ವರ್ಷದಿಂದ ಯೋಜನೆ ರೂಪಿಸಿದ್ದನು. ಹತ್ಯೆಗೂ ಒಂದು ವಾರ ಮುನ್ನವೇ ಬೆಂಗಳೂರಿನ ನಾಯಂಡಹಳ್ಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದ, ಇದಕ್ಕೆ ಹಿಂದೂ ಸಂಘಟನೆಯ ಮುಖಂಡ ನವೀನ್ ಸಹಕರಿಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಬೆಚ್ಚಿಬಿದ್ದ ಆರೋಪಿಗಳು?

ಬುಧವಾರ ಸಿಟ್ ತನಿಖಾಧಿಕಾರಿಗಳು, ಆರೋಪಿಗಳಾದ ಅಮೋಲ್ ಕಾಳೆ, ಪರಶುರಾಮ್ ಹಾಗೂ ನವೀನ್‌ನನ್ನು ಮುಖಾಮುಖಿ ಮಾಡಿದಾಗ ಬೆಚ್ಚಿಬಿದ್ದಿದ್ದು, ಸಿಕ್ಕಿಬಿದ್ದಿರುವ ಹಾಗೇ ವರ್ತನೆ ಮಾಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News