ಪ್ರತ್ಯೇಕ ಸಭೆಗಳನ್ನು ನಡೆಸದಂತೆ ಅತೃಪ್ತರಿಗೆ ವೇಣುಗೋಪಾಲ್ ಸೂಚನೆ
Update: 2018-06-14 21:54 IST
ಬೆಂಗಳೂರು, ಜೂ.14: ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ತಪ್ಪಿರುವುದಕ್ಕೆ ಹಿರಿಯ ಶಾಸಕರಿಗೆ ಅಸಮಾಧಾನ ಆಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸಚಿವ ಸ್ಥಾನ ಕೊಡಲು ಆಗುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಗುರುವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ್ದೇನೆ. ಇಂದಿನಿಂದ ಯಾವುದೇ ಪ್ರತ್ಯೇಕ ಸಭೆ ಮಾಡಬೇಡಿ ಎಂದು ಹೇಳಿದ್ದೇನೆ ಎಂದರು.
ಸೂಕ್ತ ಸಮಯದಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇವೆ. ಅಸಮಾಧಾನಿತರನ್ನು ಸಮಾಧಾನ ಪಡಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ. ಸಮನ್ವಯ ಸಮಿತಿಯಲ್ಲಿ ಏನು ನಡೆಯಿತು ಅನ್ನೋದು ಆಂತರಿಕ ವಿಚಾರ. ಅದನ್ನು ಮಾಧ್ಯಮಗಳ ಎದುರು ಬಹಿರಂಗವಾಗಿ ಚರ್ಚಿಸಲು ಆಗುವುದಿಲ್ಲ ಎಂದು ವೇಣುಗೋಪಾಲ್ ಹೇಳಿದರು.