×
Ad

ಶಿಕ್ಷಕರ ಸಮಸ್ಯೆಗೆ ಹೋರಾಟ ಮಾಡಿದರೂ ಅವಕಾಶ ನೀಡಲಿಲ್ಲ: ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್

Update: 2018-06-14 22:49 IST

ಮೈಸೂರು,ಜೂ.14: ಕಳೆದ ಆರು ವರ್ಷಗಳಿಂದ ಸತತವಾಗಿ ಶಿಕ್ಷಕರ ಸಮಸ್ಯೆಗೆ ಹೋರಾಟ ಮಾಡಿಕೊಂಡು ಬಂದರೂ ನನಗೆ ಅವಕಾಶ ನೀಡಲಿಲ್ಲ. ಶಿಕ್ಷಕರ ಮತಗಳು ಸಹ ಜಾತಿ ಆಧಾರದಲ್ಲಿ ವಿಂಗಡಣೆಯಾಗಿರುವುದು ನೋವು ತಂದಿದೆ. ನನಗೆ ಮತ ನೀಡಿದ ಶಿಕ್ಷಕರೆಲ್ಲರಿಗೂ ಕೃತಜ್ಞತೆಗಳು ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಕಣ್ಣೀರು ಹಾಕಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯಕ್ಕೆ ಬಂದು ತಪ್ಪು ಮಾಡಿದ್ದು, ಕೆಲಸ ಮಾಡುವವರಿಗೆ ರಾಜಕಾರಣದಲ್ಲಿ ನೆಲೆಯಿಲ್ಲವೆಂದು ಕಳೆದ ನಾಲ್ಕು ಚುನಾವಣೆಯಿಂದ ಅರಿವಾಗಿದ್ದು, ಇನ್ನೆಂದೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ಕಳೆದ ಜೂ.8 ರಂದು ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪ್ರಬುದ್ಧ ಮತದಾರರಾದ ಶಿಕ್ಷಕರು ಸಹ ಜಾತಿ, ಹಣದ ಅಮಿಷಕ್ಕೆ ಒಳಗಾಗಿ ಮತಚಲಾಯಿಸಿರುವುದು ನೋವಾಗಿದ್ದು, ಇದರಿಂದಾಗಿ ನನಗೆ ಸೋಲಾಗಿದೆ. ಅಲ್ಲದೇ ಎರಡನೇ ಪ್ರಾಶಸ್ತ್ಯದ ಮತವನ್ನು ತನಗೆ ನೀಡದೇ ಇರುವುದು ಹಲವು ಅನುಮಾನಕ್ಕೇಡೆ ಮಾಡಿದೆ ಎಂದು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

ಕಡಿಮೆ ಅಂತರದಿಂದ ಸೋತಿರುವುದು ನೋವಾಗಿದ್ದು, ಆ ಆಘಾತದಿಂದ ಇನ್ನೂ ಹೊರ ಬರಲು ಸಾಧ್ಯವಾಗಿಲ್ಲ, ರಾಜಕೀಯಕ್ಕೆ ಬಂದು ಆಸ್ತಿ, ಮನೆ, ಪತ್ನಿಯ ಒಡವೆಯನ್ನು ಕಳೆದುಕೊಂಡಿದ್ದು, ಜೀವನ ನಡೆಸುವುದೇ ದುಸ್ಥರವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಮಂಡ್ಯ, ಮೈಸೂರು ಗ್ರಾಮಾಂತರ ಹಾಗೂ ಹಾಸನ ಜಿಲ್ಲೆಯ ಶಿಕ್ಷಕರು ಹೆಚ್ಚಿನ ಮತ ನೀಡಿದ್ದು, ಮೈಸೂರು ನಗರ ಶಿಕ್ಷಕರು 2ನೇ ಪ್ರಾಶಸ್ತ್ಯ ಮತ ನೀಡಿಲ್ಲವೆಂದು ಮರುಗಿದರು. ಅಲ್ಲದೇ ಮತ ನೀಡಿದ ಹಾಗೂ ನೀಡದ ಎಲ್ಲಾ ಶಿಕ್ಷಕರಿಗೂ ಅಭಿನಂದಿಸಿ, ಸೋತರು ಸಹ ಶಿಕ್ಷಕರ ಸಮಸ್ಯೆಗಳಿಗೆ ನಾನು ಸದಾ ಸ್ಪಂಧಿಸಿ ಹೋರಾಟ ನಡೆಸುವೆ ಎಂಬಾ ಆಶ್ವಾಸನೆ ನೀಡಿ, ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಘೋಷಿಸಿದ್ದ ಆಶ್ವಾಸನೆಯಂತೆ ರಾಷ್ಟ್ರೀಯ ವಿಮಾ ಯೋಜನೆ ರದ್ದತಿ, (ಎಂಪಿಎಸ್) ಕಾಲಮಿತಿ ಭರ್ತಿಗೆ ಸರ್ಕಾರದ ಅನುಮೋದನೆ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನವನ್ನು ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಜೆಡಿಎಸ್ ಏಕಮುಖವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಹಾಗೇನಾದರೂ ಮಾಡಿದಲ್ಲಿ ಹೋರಾಟ ನಡೆಸಿ ಶಿಕ್ಷಕರ ಹಿತ ಕಾಪಾಡುವೆ ಎಂದು ಆಶ್ವಾಸನೆ ನೀಡಿದರು.

ಕಾಂಗ್ರೆಸ್ ಮುಖಂಡರು ಮತ್ತು ಸ್ನೇಹಿತರು ಪತ್ರಿಕಾಗೊಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News