×
Ad

ಕೊಪ್ಪ: ಧಾರಾಕಾರ ಮಳೆಗೆ ವಿವಿಧೆಡೆ ಹಾನಿ; ಮರಗಳು ಉರುಳಿ ರಸ್ತೆ ಸಂಚಾರ ಸ್ಥಗಿತ

Update: 2018-06-14 22:55 IST

ಕೊಪ್ಪ, ಜೂ.14: ಭಾರೀ ಮಳೆಯಿಂದಾಗಿ ತಾಲೂಕಿನ ಸೀತಾ, ಬ್ರಾಹ್ಮೀ, ಕಪಿಲಾ ಹೊಳೆ ಹಾಗೂ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.

ಮಂಗಳವಾರ ಬೆಳಿಗ್ಗಿನಿಂದ ಬುಧವಾರ ಬೆಳಿಗ್ಗೆ 10 ರವರೆಗೆ ತಾಲೂಕಿನಲ್ಲಿ ದಾಖಲೆಯ 135 ಮಿ.ಮೀ. ಮಳೆಯಾಗಿದೆ. ಕಮ್ಮರಡಿಯಲ್ಲಿ ಅತೀ ಹೆಚ್ಚು 212.5 ಮಿ.ಮೀ ಮಳೆಯಾಗಿದ್ದರೆ ಹರಿಹರಪುರದಲ್ಲಿ 172 ಮಿ.ಮೀ. ಕೊಪ್ಪದಲ್ಲಿ 158 ಮಿ.ಮೀ. ಮಳೆಯಾಗಿದೆ. ಭಾರೀ ಮಳೆಗೆ ರಸ್ತೆಯ ಮೇಲೆ ಮರಳು ಉರುಳಿ ಬುಧವಾರ ಬೆಳಿಗ್ಗೆ ಕೆಲಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಾಲೂಕಿನ ವಿವಿಧ ಭಾಗಗಳಲ್ಲಿ ಧರೆ ಕುಸಿತ ಉಂಟಾಗಿದೆ. ಮನೆಗಳಿಗೆ ಹಾನಿಯಾಗಿದೆ. 

ಪಟ್ಟಣದ ಹೊರವಲಯದ ಸಣ್ಣಕೆರೆ ಸರ್ಕಾರಿ ಶಾಲೆ ಬಳಿ ರಸ್ತೆಯ ಮೇಲೆ ಮರಬಿದ್ದು ಗುಣವಂತೆ- ಕೊಪ್ಪ ಸಂಪರ್ಕ ಕಡಿತಗೊಂಡಿತ್ತು. ಕೊಪ್ಪ ತೀರ್ಥಹಳ್ಳಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಅಮ್ಮಡಿ ಬಳಿ ಭಾರೀ ಗಾತ್ರದ ಮರಗಳು ರಸ್ತೆ ಮೇಲೆ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೊಪ್ಪ-ಜಯಪುರ ನಡುವಿನ ಎನ್.ಕೆ. ರಸ್ತೆ ಬಳಿ ಹಾಗೂ ಕೊಪ್ಪ-ಶಿವಮೊಗ್ಗ ಮಧ್ಯೆ ಕುದುರೆಗುಂಡಿ ಬಳಿ ಮರಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೊಪ್ಪ ಸಿದ್ಧರಮಠ ರಸ್ತೆಯ ಚೌಕಿ ಬಳಿ ಬ್ರಾಹ್ಮೀ ನದಿಯಲ್ಲಿ ಪ್ರವಾಹ ಉಕ್ಕಿ ರಸ್ತೆಗೆ ಉಕ್ಕಿ ಹರಿದು ಸಂಚಾರ ಕಡಿತಗೊಂಡಿತ್ತು. ಭಂಡಿಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರೇಕಲ್ ಸಮೀಪದ ಹಾಳೂರು ಬಳಿ ಹಳ್ಳದ ದಂಡೆ ಒಡೆದು ಪಕ್ಕದ ಬಿ.ಟಿ. ಗೋಪಾಲ್‍ನಾಯಕ್ ಮತ್ತಿತರರ ಗದ್ದೆಗಳಿಗೆ ಪ್ರವಾಹ ಬಂದು ಮರಳು ತುಂಬಿ ಅಪಾರ ಪ್ರಮಾಣದ ಹಾನಿಯಾಗಿದೆ. ಕಾರಂಗಿ ಬಳಿ ತುಂಗಾ ನದಿ ಪ್ರವಾಹದಿಂದ ರಸ್ತೆ ಮೇಲೆ ನೀರು ಬಂದು ಕೊಪ್ಪ-ಭಂಡಿಗಡಿ ರಸ್ತೆ ಸಂಪರ್ಕ ಕಡಿದುಹೋಗಿತ್ತು

ತಾಲೂಕಿನ ಭಂಡಿಗಡಿಯ ಹರನಮಕ್ಕಿ ಆಶ್ರಯ ಬಡವಾಣೆಯಲ್ಲಿ ಮನೆಯ ಹಿಂದೆ ಧರೆಕುಸಿತದಿಂದ ಅಪಾಯ ಉಂಟಾಗಿದೆ. ಮೇಲ್ ಬಿಲ್ರೆಯಲ್ಲಿ ಗಣಪತಿ ದೇವಸ್ಥಾನದ ಎದುರಿನ ಶೆಲ್ಟರ್ ನ ಸಿಮೆಂಟ್ ಶೀಟ್‍ಗಳು ಹಾರಿಹೋಗಿ ನಷ್ಟವುಂಟಾಗಿದೆ.

ಶೃಂಗೇರಿ-ಆಗುಂಬೆ ಹೊರತುಪಡಿಸಿ ಇನ್ನುಳಿದ ಕಡೆ ತಾಲೂಕು ಕೇಂದ್ರದಿಂದ ಸಂಪರ್ಕ ಕಲ್ಲಿಸುವ ಎಲ್ಲಾ ರಸ್ತೆಗಳು ಸಂಪರ್ಕ ಕಡಿದುಕೊಂಡು ಬೆಳಿಗ್ಗಿನ ಹೊತ್ತು ಬಸ್ ಸಂಚಾರ ಸ್ಥಗಿತಗೊಂಡಿತ್ತು. 9 ಗಂಟೆಯ ಹೊತ್ತಿಗೆ ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಕಾರದಿಂದ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.

ತಹಶೀಲ್ದಾರ್ ಸತ್ಯನಾರಾಯಣ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News