×
Ad

ಶೃಂಗೇರಿ: ಭಾರೀ ಮಳೆಗೆ ತುಂಬಿ ಹರಿದ ತುಂಗಾ ನದಿ

Update: 2018-06-14 23:03 IST

ಶೃಂಗೇರಿ, ಜೂ.14: ತಾಲೂಕಿನಲ್ಲಿ ಬುಧವಾರ ರಾತ್ರಿ ಪ್ರಾರಂಭಗೊಂಡ ಮಳೆಯು ಸತತವಾಗಿ ಗುರುವಾರವು ಮುಂದುವರಿದಿದೆ. ಜನವರಿಯಿಂದ ಇಲ್ಲಿಯ ತನಕ 1210.2ಮಿ.ಮೀ ಮಳೆಯಾಗಿದೆ. ಗುರುವಾರ 116.0ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ. ಎಡೆಬಿಡದ ಮಳೆಯಿಂದ ತಾಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಲೂಕಿನ ಕೆರೆಕಟ್ಟೆ, ನೆಮ್ಮಾರ್, ಕಿಗ್ಗಾ ಮುಂತಾದ ಕಡೆ ಅತಿಯಾದ ಮಳೆ ಸುರಿದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ-169 ರಲ್ಲಿ ಧರೆಗಳು ಮತ್ತು ಮರಗಳು ಕುಸಿದಿದೆ. ಹಾಗಾಗಿ ದಕ್ಷಿಣ ಕನ್ನಡದಿಂದ ಬರುವ ಬಸ್ಸು ಹಾಗೂ ಇತರ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ತುಂಗಾನದಿಯ ಹರಿವು ತೀವ್ರಗೊಂಡ ಪರಿಣಾಮ ಗಾಂಧಿ ಮೈದಾನದ ಅಂಗಡಿಮುಂಗಟ್ಟುಗಳಲ್ಲಿ ದಾಸ್ತಾನು ಆಗಿರುವ ವಸ್ತುಗಳನ್ನು ತೆರವುಗೊಳಿಸಲಾಗಿದೆ.

ಶ್ರೀಮಠದ ಭೋಜನಶಾಲೆ, ಸಂಧ್ಯಾವಂದನೆಮಂಟಪ, ಕಪ್ಪೆಶಂಕರದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ. ನರಸಿಂಹವನದ ಗುರುನಿವಾಸಕ್ಕೆ ತೆರಳುವ ಮಾರ್ಗವು ನೀರಿನಿಂದ ಆವೃತ್ತಗೊಂಡು ಭಕ್ತರು ಗುರುನಿವಾಸಕ್ಕೆ ತೆರಳಲು ಅಸಾಧ್ಯವಾಗಿತ್ತು. ಬಂದ ಪ್ರವಾಸಿಗರು ತೆಕ್ಕೂರು ರಸ್ತೆಯ ಮಾರ್ಗವಾಗಿ ಗುರುನಿವಾಸಕ್ಕೆ ತೆರಳಿ ಗುರುಗಳ ಆರ್ಶೀವಚನ ಪಡೆದರು. ಶ್ರೀಮಠದ ಭೋಜನಶಾಲೆಯ ಕೆಳಭಾಗದಲ್ಲೂ ಸುಮಾರು ಮೂರು ಅಡಿಯಷ್ಟು ನೀರು ನಿಂತ ಬಗ್ಗೆ ವರದಿಯಾಗಿದೆ.

ಗಾಂಧಿಮೈದಾನದ ಪರ್ಯಾಯರಸ್ತೆ, ಕುರುಬಕೇರಿರಸ್ತೆ, ಮುಖ್ಯರಸ್ತೆಗೆ ಸಂಪರ್ಕ ಸಾಧಿಸುವ ಹಲವು ರಸ್ತೆಗಳು ಮುಳುಗಡೆಗೊಂಡಿದ್ದು, ಕೆ.ವಿ.ಆರ್.ರಸ್ತೆಯಲ್ಲಿದ್ದ ಅಂಗಡಿಗಳಿಗೆ ನೀರು ನುಗ್ಗಿದೆ. ಅಂಗಡಿಯಲ್ಲಿದ್ದ ಪರಿಕರಗಳನ್ನು ಸ್ಥಳಾಂತರಿಸಲಾಗಿದೆ. 

ತಾಲೂಕಿನ ಕಿಕ್ರೆ, ಕೊರಡಕಲ್, ತೆಕ್ಕೂರು, ಕಾವಡಿ, ನೆಮ್ಮಾರ್ ಮುಂತಾದ ಕಡೆ ರಸ್ತೆಯ ಮೇಲೆ ನೀರು ನಿಂತಿದ್ದು ಸುಮಾರು ಮೂರುಗಂಟೆಗಳ ಕಾಲ ವಾಹನ ಹಾಗೂ ಜನಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಪ.ಪಂ ಇಲಾಖೆಗಳು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದು ಅಗ್ನಿಶಾಮಕದಳದ ಸಿಬ್ಬಂದಿ, ಸರಕಾರಿ ಅಸ್ಪತ್ರೆಯ 108 ಹಾಗೂ ಪ.ಪಂನ ಬೋಟ್ ಅವಘಡ ಸಂಭವಿಸಿದ್ದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿ ನಿಂತಿವೆ. 2008ರಲ್ಲಿ ಇದೇ ರೀತಿಯ ಮಳೆ ಕಾಣಿಸಿಕೊಂಡಿದ್ದು ಗುರುವಾರ ಬಂದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಅಡಿಕೆ ಮರಗಳಿಗೆ ಜೂನ್ ತಿಂಗಳಲ್ಲಿ ಔಷಧಿ ಸಿಂಪಡಿಸುವುದು ವಾಡಿಕೆ. ಆದರೆ ಒಂದು ವಾರದಿಂದ ಎಡೆಬಿಡದೆ ಮಳೆ ಬರುತ್ತಿದ್ದ ಕಾರಣ ತೋಟದ ಕೆಲಸಗಳು ಸ್ಥಗಿತಗೊಂಡಿವೆ. ಅತಿಯಾದ ಮಳೆಯಿಂದ ಅಡಿಕೆ ಮತ್ತು ಕಾಳುಮೆಣಸಿನ ಬಳ್ಳಿಗಳಿಗೆ ಕೊಳೆರೋಗ ತಗಲುವ ಭೀತಿ ಎದುರಾಗಿದೆ. ಅಡಿಕೆ ತೋಟದಲ್ಲಿರುವ ಬಸಿ ಕಾಲುವೆ ಸ್ವಚ್ಛಗೊಳಿಸಲು ಮಳೆ ತೊಂದರೆ ನೀಡುತ್ತಿದೆ. ತಗ್ಗುಪ್ರದೇಶದ ಭತ್ತದ ಗದ್ದೆಗಳಲ್ಲಿ ನೀರು ನಿಂತಿದ್ದು ಕೃಷಿಚಟುವಟಿಕೆಗೆ ಅಡಚಣೆ ಉಂಟಾಗಿದೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಗ್ರಾಮೀಣ್ರದೇಶಗಳಲ್ಲಿ ಮೂರುದಿನಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News