×
Ad

ಮಳೆ ಅನಾಹುತ: ಗೋಣಿಕೊಪ್ಪ - ಮೈಸೂರು ಹೆದ್ದಾರಿ ಸಂಪರ್ಕ ಕಡಿತ

Update: 2018-06-14 23:16 IST

ಮಡಿಕೇರಿ, ಜೂ.14: ತಿತಿಮತಿಯಲ್ಲಿ ಸೇತುವೆ ಕುಸಿತದಿಂದ ಗೋಣಿಕೊಪ್ಪ - ಮೈಸೂರು ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಗುರುವಾರ ಮಧ್ಯಾಹ್ನ ಹೊತ್ತಿಗೆ ಘಟನೆ ಸಂಭವಿಸಿದ್ದು, ಬದಲಿ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿವೆ.

ಈ ಮಾರ್ಗವಾಗಿ ಸಂಚರಿಸಬೇಕಾದ ವಾಹನಗಳು ಗೋಣಿಕೊಪ್ಪ, ಪಾಲಿಬೆಟ್ಟ, ಘಟ್ಟದಳ್ಳ, ಮಾಲ್ದಾರೆ, ಪಿರಿಯಾಪಟ್ಟಣ ಮಾರ್ಗವಾಗಿ ಸಂಚರಿಸುತ್ತಿದೆ. ಮತ್ತೊಂದು ಮಾರ್ಗವಾಗಿ ಗೋಣಿಕೊಪ್ಪ, ಮಾಯಮುಡಿ, ಬಾಳೆಲೆ, ಕಾರ್ಮಾಡು, ಮೂರ್ಕಲ್, ನಾಗರಹೊಳೆ ಮಾರ್ಗವಾಗಿ ಹುಣಸೂರು ತಲುಪುತ್ತಿದೆ.

ತಿತಿಮತಿ ಮುಖ್ಯ ರಸ್ತೆಯ ಬಾಳುಮಾನಿ ತೋಡಿನಿಂದ ಬರುವ ಹೊಳೆಗೆ ಲೋಕೋಪಯೋಗಿ ಇಲಾಖೆ ಮೂಲಕ ನೂತನ ಸೇತುವೆ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಸೇತುವೆಯ ಪಕ್ಕದಲ್ಲಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಭಾರೀ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.

ಗೋಣಿಕೊಪ್ಪ–ಮೈಸೂರು ರಾಜ್ಯ ಹೆದ್ದಾರಿಯಾಗಿರುವುದರಿಂದ ದಿನಂಪ್ರತಿ ಸಾವಿರಾರು ವಾಹನಗಳು ಇದೇ ರಸ್ತೆಯನ್ನು ಅವಲಂಭಿಸಿವೆ. ನಾಲ್ಕೇರಿ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದ್ದು, ಹರಿಹರ, ನಾಲ್ಕೇರಿಯಲ್ಲಿ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. 

ಕುರ್ಚಿ ಗ್ರಾಮದಲ್ಲಿ 7 ಇಂಚು ಮಳೆ ಸುರಿದಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದು, 3 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಟ್ಟ - ಬಾಡಗ ಗ್ರಾಮದಲ್ಲಿ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ರಾತ್ರಿಯಿಂದ ಸುರಿಯುತ್ತಿದೆ. ಜನರು ಮನೆಯಿಂದ ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಕಳೆದ 7 ದಿನಗಳಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News