‘ಅಮ್ಮ’ ಹೆಸರಿನಲ್ಲಿ ಗೌರಿಗೆ ಗುಂಡು

Update: 2018-06-16 12:41 GMT

ಬೆಂಗಳೂರು,ಜೂ.16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಹಂತಕರು ‘ಆಪರೇಷನ್ ಅಮ್ಮಾ’ ಎಂಬ ಕೋಡ್ ವರ್ಡ್ ಬಳಸಿ ಹತ್ಯೆಯ ಸಂಚು ರೂಪಿಸಿದ್ದರು ಎನ್ನಲಾಗಿದೆ.

ಹತ್ಯೆಗೂ ಮುನ್ನ ಯೋಜನೆ ನಡೆಸುವ ವೇಳೆ ಗೌರಿ ಲಂಕೇಶ್ ಹೆಸರು ಹೇಳದೆ ಅಮ್ಮ ಎಂಬ ಪದ ಬಳಸುತ್ತಿದ್ದರು. ಹತ್ಯೆಯ ಬಗ್ಗೆ ಯಾರಿಗೂ ಸುಳಿವು ಸಿಗಬಾರದು ಎನ್ನುವ ಉದ್ದೇಶದಿಂದ ಈ ಪದವನ್ನು ಕೋಡ್‌ಆಗಿ ಬಳಸಿದ್ದರು.

ಸಿಟ್ ಅಧಿಕಾರಿಗಳು ಆರೋಪಿಗಳಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿ ಮರಾಠಿ ಮಿಶ್ರಿತ ಅಕ್ಷರಗಳಲ್ಲಿ ಆರೋಪಿಗಳು ದಾಖಲಿಸಿದ್ದಾರೆ. ಇನ್ನು, ಮೊಬೈಲ್ ನಂಬರ್‌ಗಳನ್ನೂ ಸಹ ಕೋಡ್‌ನಲ್ಲಿಯೇ ಬರೆಯಲಾಗಿದೆ ಎನ್ನಲಾಗಿದ್ದು, ಸಿಟ್ ಅಧಿಕಾರಿಗಳು ಡೈರಿಯಲ್ಲಿರುವ ಕೋಡ್‌ವರ್ಡ್‌ಗಳನ್ನು ಡಿಕೋಡ್‌ಮಾಡಿದ್ದು, ಹಂತಕರು ರೂಪಿಸಿದ್ದ ಇನ್ನಿಬ್ಬರು ಸಾಹಿತಿಗಳ ಹತ್ಯೆಯ ಸಂಚಿಗೂ ಕೂಡ 2 ಅಕ್ಷರದ ಕೋಡ್‌ವರ್ಡ್ ಬಳಸಿರುವುದು ಬೆಳಕಿಗೆ ಬಂದಿದೆ.

ಕಾಯಿನ್ ಬಾಕ್ಸ್‌ನಲ್ಲೆ ಸಂಭಾಷಣೆ: ಸುಮಾರು 1ವರ್ಷಗಳ ಕಾಲ ಕಾಯಿನ್‌ಬೂತ್‌ಗಳಲ್ಲಿ ಮಾತನಾಡಿಕೊಳ್ಳುತ್ತಿದ್ದ ಆರೋಪಿಗಳು ತಮ್ಮ ಸಂಭಾಷಣೆಯಲ್ಲಿ ಕೊಲೆ ಮಾಡಬೇಕಾದ ವ್ಯಕ್ತಿ ಹೆಸರನ್ನು ಬಾಯ್ಬಿಟ್ಟಿರಲಿಲ್ಲ. ಕೇವಲ ಕೋಡ್‌ವರ್ಡ್ ಬಳಸಿ ‘ಆಪರೇಷನ್ ಅಮ್ಮ’ ಎಂದಷ್ಟೇ ಮಾತನಾಡುತ್ತಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಏರ್‌ಗನ್‌ನಿಂದ ತರಬೇತಿ:  ಗೌರಿಯನ್ನು ಹತ್ಯೆ ಮಾಡುತ್ತೇನೆ ಎಂದು ಒಪ್ಪಿದ ನಂತರ ಬೆಳಗಾವಿಯ ನಿರ್ಜನ ಪ್ರದೇಶದಲ್ಲಿ ಆ ವ್ಯಕ್ತಿಯೇ ನನಗೆ ಏರ್‌ಗನ್‌ನಿಂದ ಗುಂಡು ಹಾರಿಸುವುದನ್ನು ಹೇಳಿಕೊಟ್ಟ. ತರಬೇತಿಯ 20 ದಿನಗಳಲ್ಲಿ ಸುಮಾರು 500 ಸುತ್ತು ಗುಂಡು ಹಾರಿಸಿದೆ ಎಂದು ವಾಗ್ಮೋರೆ ವಿಚಾರಣೆ ವೇಳೆ ತಿಳಿಸಿದ್ದಾನೆ.

25ಕ್ಕೂ ಹೆಚ್ಚು ಪ್ರಗತಿಪರರು ಟಾರ್ಗೆಟ್: ಮಹಾರಾಷ್ಟ್ರದಲ್ಲಿದ್ದ ಅಮೋಲ್ ಕಾಳೆಗೆ ರಾಜ್ಯದಲ್ಲಿ ಹಿಂದುತ್ವದ ವಿರುದ್ಧ ಯಾರ್ಯಾರು ಮಾತನಾಡುತ್ತಿದ್ದರು ಎನ್ನುವ ಪಟ್ಟಿಯನ್ನು ಕರ್ನಾಟಕದ ವ್ಯಕ್ತಿಯೇ ಆತನಿಗೆ ತಯಾರಿಸಿ ಕೊಟ್ಟಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಜಾತ್ಯತೀತವಾಗಿ ಬಹಿರಂಗ ಹೇಳಿಕೆ ನೀಡುತ್ತಿದ್ದ ಸಾಹಿತಿಗಳು, ಸ್ವಾಮೀಜಿಗಳು ಸೇರಿದಂತೆ ರಾಜ್ಯದ 10ಜನ ಹಾಗೂ ಇತರ ರಾಜ್ಯಗಳ 16 ಜನ ಪ್ರಗತಿಪರ ಚಿಂತಕರ ಹೆಸರನ್ನು ಆರೋಪಿಗಳು ತಮ್ಮ ಡೈರಿಯಲ್ಲಿ ದಾಖಲಿಸಿಕೊಂಡಿದ್ದರು. ಈ ಸಂಬಂದ ಅಧಿಕಾರಿಗಳು ಇನ್ನುಳಿದ ಆರೋಪಿಗಳಿಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.

ವಾಗ್ಮೋರೆ ಕುಟುಂಬ ವಿಚಾರಣೆ:  ಹತ್ಯೆ ಸಂಬಂಧ ಬಂಧಿಸಿರುವ ಆರೋಪಿ ಪರಶುರಾಮ್ ವಾಗ್ಮೋರೆ ಅವರ ಕುಟುಂಬ ನಗರಕ್ಕೆ ಬಂದಿದ್ದು, ಸಿಟ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪರಶುರಾಮ್ ವಾಗ್ಮೋರೆ ತಂದೆ ಅಶೋಕ ವಾಗ್ಮೋರೆ, ತಾಯಿ ಜಾನಕಿಬಾಯಿ, ಮಾವ ಅಶೋಕ ಕಾಂಬಳೆ ವಿಚಾರಣೆ ನಡೆಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಗುಂಡಿಕ್ಕಿದ್ದು ವಾಗ್ಮೋರೆ?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಅಮೋಲ್ ಕಾಳೆ ಸೂತ್ರದಾರ. ಗುಂಡಿಕ್ಕಿದ್ದು ಸಿಂಧಗಿ ಮೂಲದ ಪರಶುರಾಮ್ ವಾಗ್ಮೋರೆ ಎನ್ನುವುದು ಸಿಟ್ ಅಧಿಕಾರಿಗಳ ತನಿಖೆಯಿಂದ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನುಳಿದಂತೆ ಕೃತ್ಯದಲ್ಲಿ ಭಾಗಿಯಾಗಿರುವ ನಿಹಾಲ್ ಅಲಿಯಾಸ್ ದಾದಾ ಸೇರಿದಂತೆ ಇನ್ನೂ ಮೂವರು ಆರೋಪಿಗಳು ಸಿಕ್ಕರೆ ಗೌರಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳ್ಳಲಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News