ನಮ್ಮ ಸರಕಾರ ಮಂಡಿಸಿದ ಬಜೆಟ್ ಮುಂದುವರಿಯಲಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-06-16 14:46 GMT

ಬೆಂಗಳೂರು, ಜೂ. 16: ಈಗಾಗಲೇ ಮಂಡಿಸಿರುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಲವನ್ನು ಸೇರಿಸಬಹುದು. ಈ ಹಿಂದೆ ನಮ್ಮ ಸರಕಾರ ಮಂಡಿಸಿದ ಬಜೆಟ್ ಮುಂದುವರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಜೆಟ್‌ನಲ್ಲಿ ಏನೇನೂ ಸೇರಿಸಬೇಕೆಂದು ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಯಲ್ಲಿ ನಿರ್ಧರಿಸಲಿದೆ. ನಾನು ಯಾವುದೇ ಸಂದರ್ಭದಲ್ಲಿಯೂ ಆಡಳಿತ ವಿಷಯದಲ್ಲಿ ಕೈ ಹಾಕುವುದಿಲ್ಲ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.

ರೈತರ ಸಾಲಮನ್ನಾಕ್ಕೆ ನನ್ನ ಯಾವುದೇ ವಿರೋಧ ಇಲ್ಲ. ನಾನು ಕಳೆದ ಬಾರಿ ಸಾಲಮನ್ನಾ ಮಾಡಿದ್ದೇನೆ, ನಾನು ಸಾಲಮನ್ನಾದ ಪರವಾಗಿದ್ದೇನೆ ಎಂದ ಅವರು, ಒಂದು ವರ್ಷ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ, ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು. ಅವರು ಏಕೆ ಹಾಗೇ ಹೇಳಿದ್ದಾರೋ ನನಗೆ ಅರ್ಥಾಗಿಲ್ಲ, ಆಗುವುದು ಬೇಡ ಎಂದರು.

ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಈಗಲೇ ಮಾಡುತ್ತೇವೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಆಸಕ್ತಿ ಇಲ್ಲ. ವರಿಷ್ಠರು ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆ ಪಕ್ಷ ಹೆಚ್ಚಿನ ಸ್ಥಾನವನ್ನು ಗೆಲ್ಲಬೇಕು. ಆ ಹಿನ್ನೆಲೆಯಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಹೀಗಾಗಿ ಕೆಲ ದಿನಗಳ ಕಾಲ ವಿಶ್ರಾಂತಿಗಾಗಿ ನಾನು ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.

‘ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಬದಲು ಲೇಖಾನುದಾನ ಮಾತ್ರ ಮಂಡಿಸಲಿ. ಈಗಾಗಲೇ ನಾನು ಬಜೆಟ್ ಮಂಡಿಸಿ ಇನ್ನು ಕೆಲವು ತಿಂಗಳು ಕಳೆದಿಲ್ಲ. ಅದರಲ್ಲೇ ಸಾಕಷ್ಟು ಜನಪರವಾದ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೆ. ಅವುಗಳನ್ನು ಅನುಷ್ಠಾನಗೊಳಿಸಲಿ. ಜತೆಗೆ ಹೊಸ ಕಾರ್ಯಕ್ರಮಗಳನ್ನು ಸೇರಿಸಲಿ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News