ಶ್ರೀರಾಮಸೇನೆ 'ಹೆಡ್ ಆಫೀಸ್ ತನಿಖೆಗೆ ಒಳಪಡಿಸಬೇಕು': ಸಿ.ಎಂ.ಇಬ್ರಾಹೀಂ

Update: 2018-06-16 16:01 GMT

ಬೆಂಗಳೂರು, ಜೂ. 16: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರುಶುರಾಮ್ ವಾಗ್ಮೋರೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದು, ಇಂತಹ ಯುವಕರ ಹಿಂದೆ ಇರುವ ಶಕ್ತಿಯನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ಒತ್ತಾಯಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಯುವಕ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆತನ ತಲೆ ತಿರುಗಿಸಿದ, ಇವರ ಹಿಂದೆ ಇರುವ ದುಷ್ಟ ಶಕ್ತಿಯನ್ನು ಪತ್ತೆ ಹಚ್ಚಬೇಕು ಎಂದರು.

ಗೌರಿ ಹತ್ಯೆ ಪ್ರಕರಣದಿಂದ ರಾಜ್ಯದ ಜನತೆಗೆ ಎಲ್ಲವೂ ಗೊತ್ತಾಗಿದೆ. ಕಾಯಿಲೆಗೆ ಮದ್ದು ಕಂಡು ಹಿಡಿದರೆ ಸಾಲದು. ಕಾಯಿಲೆಗೆ ಕಾರಣವಾದದ್ದನ್ನು ಪತ್ತೆ ಮಾಡಬೇಕು ಎಂದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿಂದಿನ ಎಲ್ಲ ಶಕ್ತಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಹೆಡ್ ಆಫೀಸ್: ಶ್ರೀರಾಮಸೇವೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇದರ ಹೆಡ್ ಆಫೀಸ್ ಎಂದು ಗಂಭೀರ ಆರೋಪ ಮಾಡಿದ ಇಬ್ರಾಹೀಂ, ಮೊದಲು ಅವರನ್ನು ತನಿಖೆಗೆ ಒಳಪಡಿಸಬೇಕು. ಅವರು ದೇವರ ಬಳಿ ಹೋಗುವ ವಯಸ್ಸಲ್ಲಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ಜನರ ಜೀವನದಲ್ಲಿ ಹುಳಿ ಹಿಂಡಿರುವ ಮುತಾಲಿಕ್ ಯಾವ ಮುಖವಿಟ್ಟುಕೊಂಡು ದೇವರ ಬಳಿ ಹೋಗುತ್ತಾರೆ ಎಂದು ಪ್ರಶ್ನಿಸಿದರು.

ಮುತಾಲಿಕ್ ಇನ್ನಾದರೂ ಪಶ್ಚಾತ್ತಾಪಪಟ್ಟು ಸನ್ನಡತೆ ಮಾರ್ಗದಲ್ಲಿ ಬದುಕಲಿ. ದೇವರ ಬಳಿ ಟಿಕೆಟ್ ಪಡೆದು ಏರ್‌ಫೋರ್ಟ್‌ನಲ್ಲಿರುವ ಮುತಾಲಿಕ್ ಬಗ್ಗೆ ನನಗೆ ತುಂಬಾ ನೋವಿದೆ ಎಂದ ಅವರು, ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News