ನಿಯಮ ಉಲ್ಲಂಘಿಸಿ ಗೋದಾಮು ಬಾಡಿಗೆ ದರ ನಿಗದಿ : ಮದ್ದೂರು ಟಿಎಪಿಎಂಎಸ್ ಆಡಳಿತ ಮಂಡಳಿ ವಜಾ

Update: 2018-06-16 16:08 GMT

ಮದ್ದೂರು, ಜೂ.16: ನಿಯಮ ಉಲ್ಲಂಘಿಸಿ ಟಿಎಪಿಸಿಎಂಎಸ್‍ಗೆ ಸೇರಿದ ಗೋದಾಮನ್ನು ಕಡಿಮೆ ದರಕ್ಕೆ ಬಾಡಿಗೆಗೆ ನೀಡಿರುವ ಸಂಬಂಧ ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ ಆಡಳಿತ ಮಂಡಳಿಯನ್ನು ಸಹಕಾರ ಇಲಾಖೆ ವಜಾಗೊಳಿಸಿದೆ ಎಂದು ಸಂಘದ ಮಾಜಿ ಆಧ್ಯಕ್ಷ ಶ್ರೀಕಂಠಯ್ಯ ತಿಳಿಸಿದರು. 
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಳವಳ್ಳಿ ರಸ್ತೆಯಲ್ಲಿರುವ ಗೋದಾಮನ್ನು ಚದರಡಿಗೆ ಕೇವಲ 3 ರೂ.ನಂತೆ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಮಗಳು ನಿಶಾ ಯೋಗೇಶ್ವರ್ ಒಡೆತನದ ಕಂಪೆನಿಗೆ ಬಾಡಿಗೆ ನೀಡಲಾಗಿತ್ತು ಎಂದರು.

ಕಡಿಮೆ ದರಕ್ಕೆ ಬಾಡಿಗೆ ನೀಡಿರುವುದು ಸಹಕಾರ ಸಂಘಗಳ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಸಂಬಂಧ ಆಡಳಿತ ಮಂಡಳಿ ವಿರುದ್ಧ ಸಹಕಾರ ಕಾಯ್ದೆ 29 ಸಿ ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಅವರು ಹೇಳಿದರು.

ವಕೀಲ ಚಿಕ್ಕಮರಿ ಅವರು 2017ರ ಸೆ.17ರಂದು ಆಡಳಿತ ಮಂಡಳಿಯ ಅವ್ಯವಹಾರ ವಿರುದ್ಧ ದೂರು  ಸಲ್ಲಿಸಿದ್ದರು. ಬಳಿಕ ಈ ಸಂಬಂಧ ಇಲಾಖಾ ತನಿಖೆ ನಡೆಸಿ ಆಡಳಿತ ಮಂಡಳಿಯನ್ನು ಅನರ್ಹಗೊಳಿಸಿ ಆದೇಶಿಸಿದೆ ಎಂದು ಅವರು ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ಮರಿಗೌಡ, ದೇಶಹಳ್ಳಿ ಪಟೇಲ್ ಶಿವಶಂಕರ್ ಹಾಗೂ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಮಹದೇವು, ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News