ಪೆಟ್ರೋಲ್ ಬೆಲೆ ಹೆಚ್ಚಳ ವಿರೋಧಿಸಿ ಜೂ.18ರಿಂದ ಟ್ರಕ್ ಮಾಲಕರ ಅನಿರ್ದಿಷ್ಟಾವಧಿ ಮುಷ್ಕರ

Update: 2018-06-16 16:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.16: ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದು ಮತ್ತು ಮೂರನೆ ಪಾರ್ಟಿ ವಿಮೆ ಕಂತಿನ ದರ ಹೆಚ್ಚಳ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಅಖಿಲ ಭಾರತ ಟ್ರಕ್ ಮಾಲಕರ ಮಹಾ ಒಕ್ಕೂಟ ಜೂ.18ರಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.

ಈ ಕುರಿತು ಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲಕರ ಸಂಘಗಳ ಮಹಾ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಮಾತನಾಡಿ, ಕೇಂದ್ರ ಸರಕಾರ ಪದೇಪದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಲೇ ಬರುತ್ತಿದೆ. ಹಾಗೂ ಅವೈಜ್ಞಾನಿಕ ರೀತಿಯಲ್ಲಿ ಮೂರನೇ ಪಾರ್ಟಿ ವಿಮೆ ಕಂತಿನ ದರವನ್ನು ಹೆಚ್ಚಳ ಮಾಡಿದೆ. ಇದರಿಂದ ಟ್ರಕ್ ಮಾಲಕರು ಮತ್ತು ಸಿಬ್ಬಂದಿಗೆ ಭಾರಿ ಪ್ರಮಾಣದಲ್ಲಿ ಹೊರೆಯಾಗುತ್ತಿದೆ ಎಂದು ದೂರಿದರು.

ಲಾರಿ ಖರೀದಿಸಲು ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಮರುಪಾವತಿಸಬೇಕು. ನಿತ್ಯವು ರಾಜ್ಯ, ರಾಷ್ಟ್ರಿಯ ಹೆದ್ದಾರಿಯಲ್ಲಿ ಶುಲ್ಕ ಭರಿಸಬೇಕು. ಹೀಗೆ ಅನೇಕ ಸಮಸ್ಯೆಗಳನ್ನು ಲಾರಿ ಮಾಲಕರು ಅನುಭವಿಸುತ್ತಿದ್ದಾರೆ. ಸರಕಾರ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮಾಲಕರ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.

2012 ರಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 45.73 ರೂ. ಇದ್ದರೆ, 2018 ರಲ್ಲಿ 66.37 ರೂ. ಇದೆ. ಅದೇ ರೀತಿ 2012 ರಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 73.5 ರೂ. ಇದ್ದರೆ, ಪ್ರಸ್ತುತ 75.06 ರೂ.ಇದೆ. ಬೇರೆ ರಾಜ್ಯಗಳಲ್ಲಿ ಈ ಬೆಲೆ ಇನ್ನೂ ಹೆಚ್ಚಿದೆ. ಇದರಿಂದಾಗಿ ಟ್ರಕ್ ಮಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಮಾಡುವುದು ಅನಿವಾರ್ಯವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News