ಚಿಕ್ಕಮಗಳೂರು: ತಗ್ಗಿದ ಮಳೆ; ಮಲೆನಾಡು ನಿರಾಳ

Update: 2018-06-16 17:50 GMT

ಚಿಕ್ಕಮಗಳೂರು, ಜೂ.16 ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 1 ವಾರದಿಂದ ಸುರಿದ ಭಾರೀ ಕಡೆಗೂ ತನ್ನ ಆರ್ಭಟ ನಿಲ್ಲಿಸಿದ್ದು, ಮಲೆನಾಡಿನ ಜನತೆ ಕೊಂಚ ನಿರಾಳರಾಗಿದ್ದಾರೆ. ಮಳೆಯಿಂದ ತತ್ತರಿಸಿ ಹೋಗಿದ್ದ ಜನತೆಗೆ ಶುಕ್ರವಾರ ಮತ್ತು ಶನಿವಾರ ಮಳೆಯ ಕಾಟ ಇಲ್ಲದಂತಾಗಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 

ಮಲೆನಾಡಿನಲ್ಲಿ ಕಳೆದ ಒಂದು ವಾರದಿಂದ ಪ್ರಾರಂಭಗೊಂಡ ಮಳೆಯ ಆರ್ಭಟದಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯಮಟ್ಟ ಮೀರಿ ಹರಿದಿದ್ದವು. ಪರಿಣಾಮ ನದಿ ಪಾತ್ರದಲ್ಲಿದ್ದ ಗ್ರಾಮಗಳಿಗೆ ನೀರುನುಗ್ಗಿ ಅಪಾರಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿತ್ತು. ರಸ್ತೆ ಸಂಪರ್ಕ ಕಡಿತದಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲಾದ್ಯಂತ ಶುಕ್ರವಾರ ಮತ್ತು ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬೆಳಗ್ಗೆಯಿಂದಲೇ ಬಿಸಿಲು ಮೂಡಿತ್ತು. ಅಪಾಯಮಟ್ಟ ಮೀರಿ ಹರಿಯುತ್ತಿದ್ದ ನದಿ ನೀರಿನ ಮಟ್ಟ ಕಡಿಮೆಯಾಗಿದ್ದು, ನದಿ ಪಾತ್ರದಲ್ಲಿ ವಾಸಿಸುವ ಜನರಿಗೆ ನೆಮ್ಮದಿ ಉಂಟು ಮಾಡಿದೆ.

ಬುಧವಾರ ರಾತ್ರಿಯಿಂದ ಜಿಲ್ಲೆಯ ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲೂಕಿನಲ್ಲಿ ಸುರಿದ ಬಾರಿ ಮಳೆಯಿಂದ ರಸ್ತೆಗಳ ಮೇಲೆ ಮಣ್ಣು, ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಕಳಸ ಮತ್ತು ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಭದ್ರಾನದಿಯಲ್ಲಿ ಸಂಪೂರ್ಣ ಮುಳುಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. 150 ಅಡಿ ಎತ್ತರದಲ್ಲಿರುವ ಕಳಸ ಸಮೀಪದ ನೇಲ್ಲಿಬೀಡು ಮುಳುಗಡೆಯಾಗಿತ್ತು. ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. 

ತುಂಗಾನದಿ ನೀರಿನ ಮಟ್ಟ ಏರಿಕೆಯಾಗಿ ಶಾರದಾ ದೇವಾಲಯದ ಮೆಟ್ಟಿಲುಗಳ ವರೆಗೂ ಬಂದಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಬಾಳೆಹೊನ್ನೂರು ಸಮೀಪದ ಬನ್ನೂರು-ಮಾಲಗೋಡು ಬಳಿ ಭದ್ರಾ ನದಿಯಲ್ಲಿ ಮುಳುಗಿದ್ದ ಸೇತುವೆ ತೆರವುಗೊಂಡಿದ್ದು, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಳೆದ ಅನೇಕ ದಿನಗಳಿಂದ ಸುರಿಯುತ್ತಿದ್ದ ಮಳೆಯೂ ಶುಕ್ರವಾರ ಕಡಿಮೆಯಾಗಿದ್ದು, ಜನರು ಕೃಷಿ ಚಟುವಟಿಕೆಯತ್ತಾ ಮುಖಮಾಡಿದ್ದಾರೆ. 

ಗುರುವಾರ ತುಂಗಾನದಿ, ಭದ್ರಾನದಿ, ಹೇಮಾವತಿ ನದಿ ಪ್ರವಾಹದಿಂದ ನದಿಪಾತ್ರದ ಜಮೀನುಗಳು ನೀರಿನಿಂದ ಮುಳುಗಡೆಯಾಗಿದ್ದವು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಜಮೀನುಗಳಿಗೆ ನುಗ್ಗಿದ ನೀರಿನ ಮಟ್ಟ ಕಡಿಮೆಯಾಗಿದೆ. ಶೃಂಗೇರಿ ಶಾರದ ಪೀಠದ ಮೆಟ್ಟಿಲುಗಳ ವೆರೆಗೂ ಸಂಗ್ರಹವಾಗಿದ್ದ ನೀರು ಕಡಿಮೆಯಾಗಿದೆ. ಗುರು ನಿವಾಸಕ್ಕೆ ತರಳುವ ರಸ್ತೆ ತೆರವುಗೊಂಡಿದೆ. ಕಳಸ ಭಾಗದಲ್ಲಿ ಮಳೆಯಿಂದ ಅನೇಕ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಅಂಗಡಿಗಳು, ಹೊಟೇಲು, ಹೋಂ ಸ್ಟೇ, ಸಂಪೂರ್ಣ ಮುಳುಗಡೆಗೊಂಡಿದ್ದ ಪ್ರದೇಶಗಳಲ್ಲಿ ಶುಕ್ರವಾರ ನೀರಿನ ಮಟ್ಟ ಕಡಿಮೆಯಾಗಿದೆ.

ಮಳೆಯಿಂದ ಆದ ಹಾನಿ:
ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿಯ ಕಡಬನಹಳ್ಳಿಯ ಶೇ.50ರಷ್ಟು ಕಚ್ಚಾಮನೆಗಳಿಗೆ ಹಾನಿಯಾಗಿದೆ. ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯಲ್ಲಿ ಕೊಟ್ಟಿಗೆ ಮೇಲೆ ಮರಬಿದ್ದು ಶೇ.25ರಷ್ಟು ಹಾನಿಯಾಗಿದೆ. ಮೂಡಿಗೆರೆ ತಾಲೂಕಿನ ಮಾವಿನಕೆರೆ ಗ್ರಾಮದ ಯು.ಎನ್. ನರಸಿಂಹಮೂರ್ತಿಯವರ ಶೌಚಾಲಯ, ಮನೆಯ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ. ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ವಸಂತಮ್ಮರವರ ಧನದ ಕೊಟ್ಟಿಗೆಗೆ ಹಾನಿಯಾಗಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಹೋಬಳಿಯ ಗೋಪಾಲನಾಯ್ಕ ಅಡಿಕೆ ತೋಟದಲ್ಲಿ ಕಾಡು ಮರಬಿದ್ದು ಅಡಿಕೆ ತೋಟಕ್ಕೆ ಹಾನಿಯಾಗಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಹೋಬಳಿಯ ಅಂಬರಗೋಡು ಹೊಳೆಗರ್ಜಿ ಸೇತುವೆಗೆ ಹಾನಿಯಾಗಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಹೋಬಳಿಯ ಅಂತೋಣಯವರ ಅಡಿಕೆ ತೋಟಕ್ಕೆ ಹಾಗೂ ಹಾಲುಮಕ್ಕಿ ಸೇತುವೆಗೆ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News