ಭಾರೀ ಮಳೆ ಹಾನಿಯಿಂದಾದ ನಷ್ಟದ ಬಗ್ಗೆ ಸಿಎಂ ಜತೆ ಚರ್ಚೆ: ಶಾಸಕ ರಾಜೇಗೌಡ

Update: 2018-06-16 17:59 GMT

ಶೃಂಗೇರಿ, ಜೂ.16: ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆ ಬಂದ ಕಾರಣ ಅನೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಸಾರ್ವಜನಿಕ ಹಾಗೂ ಖಾಸಗಿ ಸೊತ್ತುಗಳಿಗೆ ಹಾನಿ ಆಗಿರುವುದನ್ನು ಗಮನಿಸಿ ಸ್ಥಳ ಪರಿಶೀಲನೆಗೆ ಬಂದಿದ್ದೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. 

ಅವರು ಶುಕ್ರವಾರ ತಾಲೂಕಿನ ಕೆಲವು ಮಳೆಹಾನಿ ಸ್ಥಳಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀರಂಗಯ್ಯ ಹಾಗೂ ಜಿ.ಪಂ.ಮುಖ್ಯಾಧಿಕಾರಿ ಸತ್ಯಭಾಮ ಅವರೊಂದಿಗೆ ಭೇಟಿ ಇತ್ತ ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಬಹಳಷ್ಟು ಕಡೆ ರಸ್ತೆ ಅಂಚು, ರಸ್ತೆ, ಮನೆ ಗೋಡೆ ಕುಸಿದಿದೆ. ಕೆಲವು ಜಾನುವಾರುಗಳು ಸತ್ತು ಹೋಗಿದ್ದು ಒಂದು ಜಿಂಕೆ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ವರದಿ ಸಿಕ್ಕಿದೆ. ರಸ್ತೆ ಬಂದ್ ಆಗಿ ಪ್ರವಾಸಿಗರಿಗೆ ಅನಾನುಕೂಲವಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪ್ರವಾಸಿಗರಿಗೆ ಕುಡಿಯುವ ನೀರು, ಆಹಾರ, ಊಟೋಪಚಾರ ಮಾಡಿದ್ದಕ್ಕೆ ಅಭಿನಂದನೆ ಇತ್ತರು.
ಮಳೆ ಮತ್ತು ನೆರೆಯಿಂದಾಗಿ ಈ ಭಾಗದಲ್ಲಿ 10 ಕೋಟಿ ರೂ.ಗಿಂತ ಹೆಚ್ಚಿನ ನಷ್ಟವಾಗಿದೆ. ಕೆಲವು ಖಾಸಗಿ ಸೊತ್ತು ಮತ್ತು ದೇವಾಲಯಗಳ ರಿವಿಟ್‍ಮೆಂಟ್‍ಗೆ ಹಾನಿ ಅಗಿರುವುದರ ವರದಿ ಸಂಗ್ರಹಿಸಿ ಅವುಗಳಿಗೆ ಸರಕಾರ ಏನು ಪರಿಹಾರ ಕೊಡಬಹುದು ಎಂದು ಮುಖ್ಯಮಂತ್ರಿಗಳಲ್ಲಿ ಮತ್ತು ಕಂದಾಯ ಸಚಿವರಲ್ಲಿ ಚರ್ಚಿಸುತ್ತೇನೆ ಎಂದರು.    

ಹಾನಿ ಬಗ್ಗೆ ವರದಿ ಕೊಡುವಂತೆ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವರು ನನಗೆ ಸೂಚನೆ ಕೊಟ್ಟಿದ್ದಲ್ಲದೇ ನಷ್ಟ ಭರಿಸುವ ಆಶ್ವಾಸನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆ ಬರುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಯಾವುದೇ ದುಸ್ಸಾಹಸಕ್ಕೆ ಮುಂದಾಗಬಾರದು ಎಂದು ರಾಜೇಗೌಡ ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News