ಸಮ್ಮಿಶ್ರ ಸರ್ಕಾರ ಬಹಳ ದಿನ ಇರಲ್ಲ : ಸಂಸದ ಜಿ.ಎಂ. ಸಿದ್ದೇಶ್ವರ

Update: 2018-06-16 18:24 GMT

ದಾವಣಗೆರೆ,ಜೂ.16: ಸಮ್ಮಿಶ್ರ ಸರ್ಕಾರ ಬಹಳ ದಿನ ಇರಲ್ಲ. ಲೋಕಸಭಾ ಚುನಾವಣೆಯ ಒಳಗೆ ವಿಧಾನಸಭೆಗೂ ಚುನಾವಣೆ ನಡೆದರೆ ಆಶ್ಚರ್ಯ ಪಡಬೇಕಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭವಿಷ್ಯ ನುಡಿದರು.

ಇಲ್ಲಿನ ರೇಣುಕಾ ಮಂದಿರದಲ್ಲಿ ಶನಿವಾರ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಏರ್ಪಡಿಸಿದ್ದ ಮತದಾರರಿಗಾಗಿ ಅಭಿನಂದನಾ ಸಮಾರಂಭ  ಉದ್ಘಾಟಿಸಿ ಮಾತನಾಡಿದರು. 

ದೇಶದಲ್ಲಿ ಕಾಂಗ್ರೆಸ್ ಮುಕ್ತ ಸ್ಥಿತಿ ಬರಬಾರದು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್‍ನವರು ಯಾವುದೇ ಷರತ್ತು ಇಲ್ಲದೇ, ಜೆಡಿಎಸ್‍ಗೆ ಬೆಂಬಲ ನೀಡಿದ್ದಾರೆ. ಅದರೆ  ಜೆಡಿಎಸ್‍ನವರಿಗೂ ಕಾಟ ಕೊಡಲು ಆರಂಭಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರೇ  ನಾನು ಒಂದು ವರ್ಷ ಸಿಎಂ ಆಗಿ ಮುಂದುವರೆಯಲು ಸಮಸ್ಯೆಯಿಲ್ಲ ಹೇಳಿರುವದನ್ನು ನೋಡಿದರೆ ಸರಕಾರ ಹೆಚ್ಚು ದಿನ ಎನ್ನುವುದು ತಿಳಿಯುತ್ತದೆ ಎಂದರು.  

ಸರ್ಕಾರ ರಚನೆಯಾಗಿ ತಿಂಗಳು ಸಮೀಪಿಸುತ್ತಿದ್ದರೂ. ಖಾತೆ ಹಂಚಿಕೆ ಗೊಂದಲ ಬಗೆಹರಿದಿಲ್ಲ, ಒಟ್ಟಿನಲ್ಲಿ ಈ ಸರ್ಕಾರಕ್ಕೆ ಅಭಿವೃದ್ಧಿಯ ಬಗ್ಗೆ ಚಿಂತನೆಯೇ ಇಲ್ಲ. ವರುಣನ ಆರ್ಭಟದಿಂದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳು ಪ್ರವಾಹಕ್ಕೆ ಒಳಗಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆದರೂ ರಾಜ್ಯ ಸರ್ಕಾರ ಅಲ್ಲಿಯ ಜನರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿಲ್ಲ. ರೈತರ ಸಾಲ ಮನ್ನಾಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಳಿದ 15 ದಿನ ಗಡುವು ಮುಗಿದರೂ, ಸಾಲ ಮನ್ನಾ ಮಾಡುವ ಗೋಜಿಗೆ ಹೋಗಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ಸಹಕಾರಿ ಬ್ಯಾಂಕ್‍ಗಳಲ್ಲಿನ 50 ಸಾವಿರದ ವರೆಗಿನ ಸಾಲ ಮನ್ನಾ ಮಾಡಿದ್ದರ ಪೂರ್ಣ ಮೊತ್ತ ಬ್ಯಾಂಕ್‍ಗಳಿಗೆ ಭರಿಸಿಲ್ಲ ಎಂದು ದೂರಿದರು. 

ದಕ್ಷಿಣ ಕ್ಷೇತ್ರದಿಂದ ಸತತ ನಾಲ್ಕುಬಾರಿ ಸ್ಪರ್ಧಿಸಿರುವ ಯಶವಂತರಾವ್ ಜಾಧವ್ ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಫೈಟ್ ನೀಡಿದ್ದಾರೆ. ಆದರೆ, ನಮ್ಮ ಕಾರ್ಯಕರ್ತರು ಅವರಿಗೆ ಅವಕಾಶ ಆಗೊಲ್ಲ, ಇವರಿಗೆ ಅವಕಾಶ ಆಗೊಲ್ಲ ಎನ್ನುವುದನ್ನು ಬಿಟ್ಟು, ಪರಸ್ಪರ ಭಿನ್ನಾಭಿಪ್ರಾಯಗಳಿದ್ದರೆ, ಕೂತು ಚರ್ಚೆ ಮಾಡಿ, ಸರಿಪಡಿಸಿಕೊಂಡು ಜಾಧವ್ ಅವರನ್ನು ಮುಂದಿನ ಬಾರಿಯಾದರೂ ಶಾಸಕರನ್ನಾಗಿ ಮಾಡಬೇಕೆಂದು ಕಿವಿಮಾತು ಹೇಳಿದರು.

ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರೇ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ನಾವು ಸೋಲುತ್ತವೆ ಎಂದು ಹೇಳುತ್ತಿದ್ದರು. ಆದ್ದರಿಂದ ನಾವು ಮೊದಲು ಮಾನಸಿಕ ಸಿದ್ಧತೆ ನಡೆಸಿಕೊಂಡು ತಯಾರಿ ನಡೆಸಬೇಕು. ಧೈರ್ಯದಿಂದ  ಮತಕೇಳಬೇಕು.  ಮುಂಬರುವ ಪಾಲಿಕೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಪ್ರಮಾಣಿಕ ಪ್ರಯತ್ನವನ್ನು ಎಲ್ಲರೂ ಮಾಡೋಣ ಎಂದು ಕರೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಬಂದ ನನ್ನಂಥವನು ಅಗರ್ಭಶ್ರೀಮಂತರ ಎದುರು ಸ್ಪರ್ಧಿಸಿದ್ದರೂ 55 ಸಾವಿರ ಮತ ನೀಡಿದಕ್ಕೆ ನಾನು ಮತದಾರರಿಗೆ ಅಭಾರಿಯಾಗಿದ್ದೇನೆ. ಇದು ನನ್ನ ಸೋಲಲ್ಲ, ಗೆಲುವು. ನನಗೆ ಭಾಷಾ ನಗರದಲ್ಲಿ 69, ಮಂಡಕ್ಕಿ ಭಟ್ಟಿಯಲ್ಲಿ 339, ಅಹ್ಮದ್ ನಗರದಲ್ಲಿ 1200, ಆಜಾದ್ ನಗರ 335 ಮತಗಳು ಮಾತ್ರ ಬಿದ್ದಿವೆ. ಈ ನಾಲ್ಕು ವಾರ್ಡ್‍ಗಳನ್ನು ಹೊರತು ಪಡಿಸಿದರೆ, ಇನ್ನೂ 14 ವಾರ್ಡ್‍ಗಳಲ್ಲಿ ಅಭೂತಪೂರ್ವ ಮತ ನೀಡಿ ಬೆಂಬಲಿಸಿದೀರಿ. ಇದು ನನ್ನ ಪುಣ್ಯ ಎಂದರು. 

ಮಾಯಕೊಂಡ ಶಾಸಕ ಎನ್.ಲಿಂಗಣ್ಣ, ಬಿಜೆಪಿ ಹೆಚ್.ಎಸ್.ನಾಗರಾಜ್   ಬಿ.ಎಂ.ಸತೀಶ್  ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್,  ರಾಜ್ಯ ಬಿಜೆಪಿ ಸ್ಲಂ ಮೋರ್ಚಾದ ಅಂಬರ್‍ಕರ್ ಜಯಪ್ರಕಾಶ್, ಅಣಬೇರು ಜೀವನಮೂರ್ತಿ, ರಮೇಶ್ ನಾಯ್ಕ, ವೈ.ಮಲ್ಲೇಶ್, ದೇವಿರಮ್ಮ, ಕರಿಬಸಪ್ಪ, ಹೆಚ್.ಎಂ.ರುದ್ರಮುನಿಸ್ವಾಮಿ, ಕೃಷ್ಣಮೂರ್ತಿ ಪವಾರ್, ಜಯಮ್ಮ ಇತರರು ಇದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News