ಅಮೆರಿಕಕ್ಕೆ ಎದಿರೇಟು ನೀಡಿದ ಚೀನಾ: 650ಕ್ಕೂ ಅಧಿಕ ಅಮೆರಿಕನ್ ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆ

Update: 2018-06-17 17:11 GMT

ಬೀಜಿಂಗ್,ಜೂ.17: ಚೀನಾದಿಂದ ತಾನು ಆಮದು ಮಾಡಿಕೊಳ್ಳುವ ಉತ್ಪನ್ನಗಳಿಗೆ ಹೆಚ್ಚುವರಿ ಸುಂಕವನ್ನು ವಿಧಿಸುವ ಅಮೆರಿಕದ ಕ್ರಮಕ್ಕೆ ರವಿವಾರ ಎದಿರೇಟು ನೀಡಿರುವ ಚೀನಾವು, 650ಕ್ಕೂ ಅಧಿಕ ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸಲು ನಿರ್ಧರಿಸಿದೆ.

  ಸುಮಾರು 50 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ 659 ಅಮೆರಿಕನ್ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವ ಚೀನಾದ ಕಸ್ಟಮ್ಸ್ ಸುಂಕ ಆಯೋಗದ ನಿರ್ಧಾರಕ್ಕೆ ಚೀನಾ ಸ್ಟೇಟ್ ಕೌನ್ಸಿಲ್ ತನ್ನ ಅನುಮೋದನೆಯನ್ನು ನೀಡಿದೆಯೆಂದು, ಚೀನಾದ ಅಧಿಕೃತ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

25 ಶೇಕಡ ಹೆಚ್ಚುವರಿ ತೆರಿಗೆಯನ್ನು ವಿಧಿಸಲಿರುವ ಅಮೆರಿಕನ್ ಉತ್ಪನ್ನಗಳ ಪಟ್ಟಿಯನ್ನು ಕೂಡಾ ಚೀನಾದ ಕಸ್ಟಮ್ಸ್ ತೆರಿಗೆ ಆಯೋಗವು ಇಂದು ಪ್ರಕಟಿಸಿದೆ.

ಚೀನಾದ ಕಸ್ಟಮ್ಸ್ ತೆರಿಗೆ ಆಯೋಗವು ಜುಲೈ 6ರಿಂದ 34 ಶತಕೋಟಿ ಡಾಲರ್ ಮೌಲ್ಯದ 545 ಅಮೆರಿಕನ್ ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆಯನ್ನು ವಿಧಿಸಲಿದ್ದು, ಅವುಗಳಲ್ಲಿ ಕೃಷಿ ಉಪಕರಣಗಳು, ವಾಹನಗಳು ಇತ್ಯಾದಿ ಒಳಗೊಂಡಿವೆ.

ಉಳಿದ 114 ಅಮೆರಿಕನ್ ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆ ಜಾರಿಗೆ ಬರುವ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಚೀನಾದ ಸುಂಕ ಆಯೋಗವು ಪ್ರಕಟಿಸಿದೆ.

ಜೂನ್ 15ರಂದು ಅಮೆರಿಕವು, ಚೀನಾದಿಂದ ತಾನು ಆಮದು ಮಾಡಿಕೊಳ್ಳುವ ಅಂದಾಜು 50 ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳ ಮೇಲೆ ಶೇ. 25ರಷ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸಿತ್ತು. ಇದು ಚೀನಾದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

‘‘ಆಮದು ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಅಮೆರಿಕದ ನಡೆಯು ವಿಶ್ವವಾಣಿಜ್ಯ ಸಂಘಟನೆಯ ಪ್ರಚಲಿತ ಕಾನೂನುಗಳಿಗೆ ವಿರುದ್ಧವಾದುದಾಗಿದೆ ಹಾಗೂ ದ್ವಿಪಕ್ಷೀಯ ಆರ್ಥಿಕ ಹಾಗೂ ಕಾನೂನು ಸಮಾಲೋಚನೆಗಳ ಕುರಿತಾಗಿ ಏರ್ಪಟ್ಟಿರುವ ಸಹಮತಕ್ಕೆ ಪ್ರತಿಕೂಲಕರವಾಗಿದ್ದು, ಚೀನಾದ ಕಾನೂನುಬದ್ಧ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಚೀನಾವು ಇದನ್ನು ಬಲವಾಗಿ ವಿರೋಧಿಸುತ್ತದೆ’’ ಎಂದು ಚೀನಾದ ವಿದೇಶ ವ್ಯಾಪಾರ ಕಾನೂನು ಇಲಾಖೆ ಹೇಳಿಕೆ ನೀಡಿರುವುದಾಗಿ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News