ಕೊಡಗು ರೈಲು ಮಾರ್ಗದ ವಿರುದ್ಧ ನಿರಶನ : ವೀರವೇ ಎಚ್ಚರಿಕೆ

Update: 2018-06-17 18:03 GMT

ಮಡಿಕೇರಿ, ಜೂ.17: ಕೇರಳ ರಾಜ್ಯದ ಹಿತ ಕಾಯುವುದಕ್ಕಾಗಿ ಕೊಡಗು ಜಿಲ್ಲೆಯನ್ನು ನಿರಂತರವಾಗಿ ಬಲಿಪಶು ಮಾಡಲಾಗುತ್ತಿದ್ದು, ಹೈ-ಟೆನ್‌ಷನ್ ವಿದ್ಯುತ್ ಮಾರ್ಗದ ನಂತರ ಇದೀಗ ರೈಲು ಮಾರ್ಗದ ಮೂಲಕ ಕೊಡಗನ್ನು ಬಲಿ ಕೊಡುವ ಹುನ್ನಾರ ನಡೆಯುತ್ತಿದೆ ಎಂದು ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಆಚಾರ್ಯ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ದಕ್ಷಿಣ ಕೊಡಗಿನ ಪರಿಸರ ಹಾಗೂ ಮೂಲನಿವಾಸಿಗಳ ಭೂಮಿಗೆ ಹಾನಿ ಉಂಟು ಮಾಡುವ ರೈಲು ಮಾರ್ಗದ ಯೋಜನೆಗೆ ಅವಕಾಶ ಕಲ್ಪಿಸಿದರೆ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊಡಗು ಒಂದು ವಿಶಿಷ್ಟ ಸಂಸ್ಕೃತಿಯ ಅಪರೂಪದ ಪುಟ್ಟ ಜಿಲ್ಲೆಯಾಗಿದ್ದು, ಇಲ್ಲಿನ ಪ್ರಕೃತಿ ಸಿರಿಯಿಂದಲೇ ರಾಜ್ಯ ಕೂಡ ಸಮೃದ್ಧವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಜಿಲ್ಲೆಯ ಪರಿಸರದ ಮೇಲೆ ಅಭಿವೃದ್ಧಿಯ ನೆಪದಲ್ಲಿ ದಾಳಿಯಾಗುತ್ತಿದ್ದು, ಕೇರಳ ರಾಜ್ಯಕ್ಕೆ ಅನುಕೂಲ ಕಲ್ಪಿಸಲು ಕೊಡಗನ್ನೇ ಬಳಸಿಕೊಳ್ಳಲಾಗುತ್ತಿದೆ.

ಹೈ-ಟೆನ್‌ಷನ್ ವಿದ್ಯುತ್ ಮಾರ್ಗ ನಿರ್ಮಾಣದಿಂದ ಜಿಲ್ಲೆಯ ಪರಿಸರ ಹಾಗೂ ಬೆಳೆಗಾರರಿಗಾದ ಕಷ್ಟ, ನಷ್ಟಗಳ ಕಹಿ ನೆನಪು ಮಾಸುವ ಮುನ್ನವೇ ಮತ್ತೆ ಕೇರಳಕ್ಕೆ ಸಂಪರ್ಕ ಕಲಿಸುವ ರೈಲು ಮಾರ್ಗವನ್ನು ದಕ್ಷಿಣ ಕೊಡಗಿನ ಮೂಲಕವೇ ನಿರ್ಮಾಣ ಮಾಡಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಇದಕ್ಕಾಗಿ ಇತ್ತೀಚೆಗೆ ಸರ್ವೆ ಕಾರ್ಯವೂ ನಡೆದಿದೆ ಎನ್ನುವ ಮಾಹಿತಿ ಇದೆ. ವೇದಿಕೆ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.

ಕೊಡಗಿನಲ್ಲಿ ಹಿರಿಯರು ಉಳಿಸಿ, ಬೆಳೆಸಿರುವ ಪರಿಸರವನ್ನು ಸಂರಕ್ಷಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಸ್ಥಳೀಯ ಮೂಲ ನಿವಾಸಿಗಳಿಗಿದೆ. ಪರಿಸರ ಅಳಿದರೆ ಪ್ರಾಕೃತಿಕ ಅಸಮತೋಲನದಿಂದ ಮುಂದಿನ ಪೀಳಿಗೆ ಹಾಗೂ ಹಿಂದಿನ ಸಂಸ್ಕೃತಿಯ ಬೆಳವಣಿಗೆಯೇ ಕಷ್ಟಸಾಧ್ಯವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರು ಹಾಗೂ ಸಂಸದರು ರೈಲು ಮಾರ್ಗ ಕೊಡಗನ್ನು ಪ್ರವೇಶಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಹರೀಶ್ ಜಿ.ಆಚಾರ್ಯ, ಜಿಲ್ಲೆಯಲ್ಲಿ ನಾಲ್ಕು ಮತ್ತು ಆರು ಲೇನ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ವೇದಿೆಯ ವಿರೋಧವಿದೆ ಎಂದು ತಿಳಿಸಿದ್ದಾರೆ.

ಹೋಂಸ್ಟೇ, ರೆಸಾರ್ಟ್‌ಗಳು ಕಾನೂನು ಬಾಹಿರವಾಗಿ ನಿರ್ಮಾಣಗೊಳ್ಳುತ್ತಿದ್ದು, ಇವುಗಳಿಂದಾಗಿ ಕೃಷಿಭೂಮಿಗಳು ಕೂಡ ನಾಶವಾಗುತ್ತಿವೆ. ಕಾಫಿ, ಏಲಕ್ಕಿ, ಭತ್ತ ಬೆಳೆಯುವ ಭೂಮಿ ಪರಿವರ್ತನೆಯಾಗಿ ತೇವಾಂಶವನ್ನು ನಾಶ ಮಾಡಬಲ್ಲ ಕಾಂಕ್ರಿಟ್ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತಿದೆ. ನೈಸರ್ಗಿಕ ಬೆಟ್ಟ, ಗುಡ್ಡಗಳ ಆಕಾರವೇ ಬದಲಾಗುತ್ತಿದ್ದು, ಇದು ಪ್ರಾಕೃತಿಕ ವಿಕೋಪಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆಗಳಿದೆ.

ಮುಂದಿನ ದಿನಗಳಲ್ಲಿ ಪುಟ್ಟ ಜಿಲ್ಲೆ ಕೊಡಗಿನಲ್ಲಿ ನಡೆಯಬಹುದಾದ ಪ್ರಕೃತಿಯ ಅನಾಹುತಗಳನ್ನು ತಡೆಯಬೇಕಾದರೆ ಈಗಿನಿಂದಲೇ ಜಿಲ್ಲೆಯ ಜನತೆ ಎಚ್ಚೆತ್ತುಕೊಂಡು ಮೂಲ ಸಂಸ್ಕೃತಿ ಮತ್ತು ಪರಿಸರಕ್ಕೆ ದಕ್ಕೆಯಾಗುವ ಚಟುವಟಿಕೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾಗಿದೆ.

ಇದಕ್ಕೆ ನಮ್ಮ ವೇದಿಕೆ ಕಾರ್ಯೋನ್ಮುಖವಾಗಿದ್ದು, ಕೊಡಗಿನ ನೆಲ, ಜಲ, ಪರಿಸರ, ವನ್ಯಜೀವಿಗಳ ರಕ್ಷಣೆಗೆ ಹೋರಾಟವನ್ನು ರೂಪಿಸಲಿದೆ. ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ವಿರೋಧಿಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
 ಒಂದು ವೇಳೆ ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ಯೋಜನೆ ಜಾರಿಗೆ ಅವಕಾಶ ನೀಡಿದರೆ ಉಪವಾಸ ಸತ್ಯಾಗ್ರಹ ಸೇರಿದಂತೆ ಹಂತಹಂತವಾಗಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಹರೀಶ್ ಜಿ.ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News