×
Ad

ನಷ್ಟದ ಪ್ರಮಾಣ ಅಂದಾಜು ಮಾಡುವಲ್ಲಿ ಕೊಡಗು ಜಿಲ್ಲಾಡಳಿತ ವಿಫಲ: ಸಚಿವ ದೇಶಪಾಂಡೆ ತೀವ್ರ ಅಸಮಾಧಾನ

Update: 2018-06-18 18:25 IST

ಮಡಿಕೇರಿ, ಜೂ.18: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ಉಂಟಾಗಿರುವ ಸರಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿ ಹಾನಿಯ ನಷ್ಟದ ಪ್ರಮಾಣವನ್ನು ಅಂದಾಜು ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ರಾಜ್ಯ ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಹಾಗೂ ಜೀವನೋಪಾಯ ಖಾತೆ ಸಚಿವ ಆರ್.ವಿ.ದೇಶಪಾಂಡೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹವಾಮಾನ ಪರಿಸ್ಥಿತಿ, ಬೆಳೆ ಪರಿಸ್ಥಿತಿ ಹಾಗೂ ಮಳೆ ಹಾನಿ ಬಗ್ಗೆ  ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಈ ಸಂಬಂಧ ಮರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕೆಲಸ ಮಾಡುವ ಬದಲು ಸ್ಥಳ ಪರಿಶೀಲನೆಗೆ ತೆರಳುವಂತೆ ಆದೇಶಿಸಿದರಲ್ಲದೆ, ಕಾನೂನು ಚೌಕಟ್ಟಿನ ಹೊರತಾಗಿ ಮಾನವೀಯ ನೆಲೆಯಲ್ಲೂ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಜಿಲ್ಲಾಡಳಿತದ ಬಳಿ 10 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅನುದಾನ ಲಭ್ಯವಿದ್ದರೂ, ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದಿರುವ ಮನೆಗಳ ಮಾಲೀಕರಿಗೆ ಇನ್ನೂ ಪರಿಹಾರ ಒದಗಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 24 ಗಂಟೆಗಳ ಒಳಗಾಗಿ ಪರಿಹಾರ ನೀಡುವಂತೆ ಆದೇಶಿಸಿದರಲ್ಲದೆ, ಮನೆಗಳು ಹಾನಿಯಾದ ಸಂದರ್ಭ ನಷ್ಟದ ಅಂದಾಜು ಮಾಡುವಾಗ ಇರುವ ಮಾನದಂಡಗಳಲ್ಲಿ ಸಡಿಲಿಕೆ ಮಾಡುವಂತೆಯೂ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಸಾಕಷ್ಟು ಮನೆಗಳು ಸಂಪೂರ್ಣವಾಗಿ ಕುಸಿದಿದ್ದರೂ, ಅಧಿಕಾರಿಗಳು ಯಾವುದೇ ಮನೆ ಸಂಪೂರ್ಣವಾಗಿ ಕುಸಿದಿಲ್ಲ ಎಂದು ವರದಿ ನೀಡಿರುವ ಬಗ್ಗೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಸಭೆಯಲ್ಲಿ ಕೆಂಡಮಂಡಲರಾದರಲ್ಲದೆ, ಎರಡೂ ತಾಲೂಕುಗಳ ತಹಶೀಲ್ದಾರರುಗಳನ್ನು ಸಭೆಯಲ್ಲೇ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಮಧ್ಯಪ್ರವೇಶಿಸಿದ ಸಚಿವರು ವೀರಾಜಪೇಟೆ ತಹಶೀಲ್ದಾರ ಗೋವಿಂದರಾಜು ಅವರಿಂದ ಮಾಹಿತಿ ಬಯಸಿದರಲ್ಲದೆ, ತಾನು ಮಾಕುಟ್ಟಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿನ ನಿವಾಸಿಯೊಬ್ಬರು ಮನೆ ಕಳೆದುಕೊಂಡಿರುವ ಬಗ್ಗೆ ಹಾಗೂ ಪರಿಹಾರ ದೊರಕದಿರುವ ಬಗ್ಗೆ ದೂರಿಕೊಂಡಿದ್ದನ್ನು ನೆನಪಿಸಿ, ತಹಶೀಲ್ದಾರರ ಕಾರ್ಯವೈಖರಿಯ ಬಗ್ಗೆ ಕಿಡಿಕಾರಿದರು. ನಷ್ಟದ ಅಂದಾಜು ಮಾಡುವ ಸಂದರ್ಭದಲ್ಲೂ ತಹಶೀಲ್ದಾರರು ಏಕಪಕ್ಷೀಯವಾದ ತೀರ್ಮಾನ ಕೈಗೊಳ್ಳತ್ತಿರುದ್ದಾರೆ ಎಂದು ಬೋಪಯ್ಯ ಹಾಗೂ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕೃತಿ ವಿಕೋಪದಂತಹ ತುರ್ತು ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೈಗೆ ವಾಚು ಕಟ್ಟಿಕೊಂಡು ಕೆಲಸ ಮಾಡುವುದನ್ನು ಕೈಬಿಡುವಂತೆ ಸೂಚ್ಯವಾಗಿ ನುಡಿದ ಸಚಿವರು, ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕೆಲಸ ಮಾಡುವ ಬದಲು ಅವರವರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರವಾಸ ಮಾಡುವಂತೆ ಸಲಹೆ ಮಾಡಿದರಲ್ಲದೆ, ಜನಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿರುವುದು ತಪ್ಪಲ್ಲ. ಅಲ್ಲದೆ ಜನರಿಗೆ ಉಪಯೋಗವಾಗುವ ಕೆಲಸವನ್ನು ಮಾಡುವ ಅಧಿಕಾರಿಗಳಿಗೆ ಮೋದಿಯವರಾಗಲಿ, ಕುಮಾರಸ್ವಾಮಿಯವರಾಗಲಿ ಏನೂ ಮಾಡುವುದಿಲ್ಲ ಎಂದು ಸೂಚ್ಯವಾಗಿ ನುಡಿದರು.

ಜಿಲ್ಲಾಧಿಕಾರಿಗಳು ವಾರಕ್ಕೆ ಎರಡು ಬಾರಿ ತಹಶೀಲ್ದಾರರು ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸುವಂತೆ ಸಲಹೆ ಮಾಡಿದ ಸಚಿವರು, ಪ್ರತಿ ವಾರ ಪ್ರಮುಖ ಇಲಾಖೆ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ ಅಧಿಕೃತವಾದ ಮಾಹಿತಿಗಳನ್ನು ಪಡೆದು ಸರಕಾರಕ್ಕೆ ವರದಿ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಭತ್ತದ ಕೃಷಿಯಿಂದ ಕೃಷಿಕರು ವಿಮುಖರಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಪರ್ಯಾಯ ಬೆಳೆಗಳನ್ನು ಬೆಳೆಯುವತ್ತ ರೈತರನ್ನು ಪ್ರೇರೇಪಿಸುವತ್ತ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪ್ರಯತ್ನಿಸುವಂತೆ ಸಲಹೆ ಮಾಡಿದರು. ಕೃಷಿ ಜಮೀನನ್ನು ಪಾಳು ಬಿಡುವುದು ರಾಷ್ಟ್ರೀಯ ನಷ್ಟ ಎಂದು ವಿಶ್ಲೇಷಿಸಿದರು. ಜಿಲ್ಲೆಯ ರೈತರು ಭತ್ತದ ಕೃಷಿಯಿಂದ ವಿಮುಖರಾಗಿರುವುದಕ್ಕೆ ಆನೆಹಾವಳಿ ಹಾಗೂ ಉತ್ಪಾದನಾ ವೆಚ್ಚ ಅಧಿಕವಾಗಿರುವುದು ಕಾರಣವಾಗಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರು ಗಮನ ಸೆಳೆದರು. ಸರಕಾರ ಭತ್ತದ ಕೃಷಿ ಮಾಡುವ ರೈತರಿಗೆ ಪ್ರೋತ್ಸಾಹ ಧನ ನೀಡಿದಲ್ಲಿ ಜಿಲ್ಲೆಯಲ್ಲಿ ಮತ್ತೆ ಭತ್ತದ ಕೃಷಿ ತಲೆ ಎತ್ತಲಿದೆ ಎಂದು ನುಡಿದರು.

ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ: ಜಿಲ್ಲೆಯ ತಹಶೀಲ್ದಾರರ ಕಚೇರಿಗಳು, ಕೃಷಿ ಇಲಾಖೆ, ಸಣ್ಣ ನೀರಾವರಿ, ಅರಣ್ಯ, ಚೆಸ್ಕಾಂ  ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಶಾಸಕರಾದ ಬೋಪಯ್ಯ, ಅಪ್ಪಚ್ಚುರಂಜನ್ ಹಾಗೂ ಎಂ.ಪಿ.ಸುನಿಲ್ ಸುಬ್ರಮಣಿ ಅವರುಗಳು ಸಚಿವರ ಎದುರೇ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಸಚಿವರು, ತಮ್ಮ ಜಿಲ್ಲೆಯಲ್ಲಿನ ಕೆಲವು ಉದಾಹರಣೆಗಳನ್ನು ನೀಡಿ ಅಧಿಕಾರಿಗಳು ಜನಪರವಾಗಿರುವಂತೆ ಸಲಹೆ ಮಾಡಿದರು. ಅಲ್ಲದೆ ನೀವು ಜನಪರವಾಗಿದ್ದಲ್ಲಿ ನಿಮಗೆ ಯಾರೂ ಏನನ್ನೂ ಮಾಡಲಾಗುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಮುಖ ರಸ್ತೆಗಳ ಬದಿ ಹಾಗೂ ಮನೆಗಳ ಸಮೀಪ ಅಪಾಯದ ಮುನ್ಸೂಚನೆ ನೀಡುತ್ತಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಮಾಕುಟ್ಟ ರಸ್ತೆ ಕುಸಿತ ಉಂಟಾದ ಸಂದರ್ಭ ಹಗಲಿರುಳು ಕಾರ್ಯನಿರ್ವಹಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಕೇರಳ ಸರಕಾರದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಜಿಲ್ಲೆಯ ಕೆಲವು ಅಧಿಕಾರಿಗಳೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ,  ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News