ಮಡಿಕೇರಿ: ಮಳೆಹಾನಿ ಪ್ರದೇಶಗಳಿಗೆ ಸಚಿವ ಆರ್.ವಿ.ದೇಶಪಾಂಡೆ ಭೇಟಿ
ಮಡಿಕೇರಿ, ಜೂ.18: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾಗಿ ಬಂದ್ ಆಗಿರುವ ವೀರಾಜಪೇಟೆ-ಕೇರಳ ಅಂತರರಾಜ್ಯ ರಸ್ತೆಯನ್ನು ರಾಜ್ಯದ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಪರಿಶೀಲನೆ ನಡೆಸಿದರು. ಹೆದ್ದಾರಿ ಗುಡ್ಡ ಕುಸಿತಕ್ಕೆ ಕಾರಣವಾಗಿರುವ ರಸ್ತೆ ಬದಿಯಲ್ಲಿರುವ ನೂರಾರು ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ಎರಡು ರಾಜ್ಯಗಳ ನಡುವಿನ ಸಂಪರ್ಕ ರಸ್ತೆಯಾದ ಅಂತರರಾಜ್ಯ ಹೆದ್ದಾರಿಯ ರಸ್ತೆ ಕುಸಿತದ ಬಗ್ಗೆ ತಿಳಿದು 'ಪ್ರಕೃತಿ ವಿಕೋಪ ನಿಧಿಯಲ್ಲಿ ಅನುದಾನದ ಕೊರತೆ ಇಲ್ಲ. ಆದ್ದರಿಂದ ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು. ಅಲ್ಲದೆ, ಜೂ.19ರಂದು ಲೋಕೋಪಯೋಗಿ ಇಲಾಖೆ ಸಚಿವರು ಮಾಕುಟ್ಟಕ್ಕೆ ಭೇಟಿ ನೀಡಲಿದ್ದು, ಅವರಿಗೆ ಸಲ್ಲಿಸುವ ವರದಿಯನ್ನು ತನಗೂ ಕಳುಹಿಸಿಕೊಡುವಂತೆ ಸಲಹೆ ಮಾಡಿದರು.
ರಸ್ತೆ ಪರಿಶೀಲನೆ ಸಂದರ್ಭ ಸಚಿವರೊಂದಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಉಪ ವಿಭಾಗಾಧಿಕಾರಿ ರಮೇಶ್ ಕೋನರೆಡ್ಡಿ, ವೀರಾಜಪೇಟೆ ತಹಶೀಲ್ದಾರ್ ಆರ್.ಗೋವಿಂದರಾಜ್, ಕಾಂಗ್ರೆಸ್ ಮುಖಂಡರಾದ ಮಿಟ್ಟು ಚಂಗಪ್ಪ, ಚಂದ್ರಮೌಳಿ, ಅಬ್ದುಲ್ ಸಲಾಂ, ಆರ್.ಎಂ.ಸಿ.ಸದಸ್ಯ ಎಂ.ಬೋಪಣ್ಣ, ಪ.ಪಂ.ಸದಸ್ಯರಾದ ರಂಜಿ ಪೂಣಚ್ಚ, ಡಿ.ಪಿ.ರಾಜೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ.ಮೋಹನ್, ನರೇಂದ್ರ ಕಾಮತ್, ವರ್ಗೀಸ್ ಲೆನಿನ್, ಅರಣ್ಯ, ಲೋಕೋಪಯೋಗಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.