'ಐಎಸ್‌ಐ ಏಜೆಂಟ್' ಎಂಬ ಮುತಾಲಿಕ್ ಹೇಳಿಕೆಗೆ ಸಿ.ಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದು ಹೀಗೆ..

Update: 2018-06-18 15:07 GMT

ಬೆಂಗಳೂರು, ಜೂ. 18: ‘ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮೇಲೆ ನಾನು ಯಾವುದೇ ವೈಯಕ್ತಿಕ ಆರೋಪ ಮಾಡಿಲ್ಲ. ಅಮಾಯಕ ಯುವಕರ ತಲೆಕೆಡಿಸಿದರು ಯಾರು? ಇದರ ಹಿಂದಿನ ಹೆಡ್ ಆಫೀಸ್ ಯಾವುದು? ಎಂದು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದೇನೆಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪರಿಷತ್ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆಚಾರವಿಲ್ಲದ ನಾಲಿಗೆ’ ಎಂಬಂತೆ ಮುತಾಲಿಕ್ ಮಾತಾಡಬಾರದು. ದೇಶದ ಪರಿಸ್ಥಿತಿ ಹಾಳು ಮಾಡಬಾರದು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕೆಂದು ಸಲಹೆ ನೀಡಿದರು.

'ನಾನೇ ಹತ್ಯೆ ಮಾಡಿದ್ದು ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಮುತಾಲಿಕ್, ಅನಂತಕುಮಾರ್ ಹೆಗಡೆಗೆ ಹೇಳುತ್ತಿದ್ದೇನೆ. ಮನುಷ್ಯ ಜೀವನ ಶಾಶ್ವತವಲ್ಲ. 60-70 ವರ್ಷ ಬದುಕುವ ನಾವು ಸಂತೋಷದಿಂದ ಇದ್ದು ಸಾಯಬೇಕು. ರಾಜಕಾರಣ ನಾಲ್ಕೈದು ವರ್ಷದ್ದಷ್ಟೇ ಎಂದು ಇಬ್ರಾಹೀಂ ತಮ್ಮದೇ ದಾಟಿಯಲ್ಲಿ ವಿಶ್ಲೇಷಿಸಿದರು.

ಪೊಲೀಸರು ಮತ್ತು ನ್ಯಾಯಾಲಯ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದು, ಅವರಿಂದ ಮಾತ್ರವೇ ಭಯೋತ್ಪಾದನೆ ತಡೆಗಟ್ಟಲು ಸಾಧ್ಯ. ಆಯಾ ಧರ್ಮದವರು ಇಂತಹ ಕೃತ್ಯಗಳನ್ನು ತಡೆಯದಿದ್ದರೆ ದೇಶಕ್ಕೆ ಭವಿಷ್ಯದಲ್ಲಿ ಗಂಡಾಂತರವಿದೆ ಎಂದು ಅವರು ಎಚ್ಚರಿಸಿದರು.

ನನ್ನನ್ನು ಐಎಸ್‌ಐ ಏಜೆಂಟ್ ಎನ್ನುವ ಪ್ರಮೋದ್ ಮುತಾಲಿಕ್ ಅವರ ಇತಿಹಾಸ ಎಲ್ಲರಿಗೂ ಗೊತ್ತು. ದೇವರು ಅವರಿಗೆ ಒಳ್ಳೆಯ ಬುದ್ಧಿಕೊಡಲಿ. ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಬಸವಣ್ಣನ ತತ್ವದಂತೆ ಕೆಲಸ ಮಾಡುತ್ತಿದ್ದೇನೆ. ನನಗೆ ಯಾವ ಐಎಸ್‌ಐ ಗೊತ್ತಿಲ್ಲ ಎಂದರು.

‘ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅಗತ್ಯವೆನಿಸಿದರೆ ಹೊಸ ಬಜೆಟ್ ಮಂಡಿಸಲಿ. ಸಿಎಂ ಹೊಸ ಹುಮ್ಮಸ್ಸಿನಲ್ಲಿದ್ದಾರೆ. ಮದುವೆಯಾಗಿದೆ, ಮುಹೂರ್ತ ನಿಗಧಿಯಾಗಿದೆ. ಹೊಸ ಆಯವ್ಯಯ ಮಂಡನೆ ನಿರ್ಧಾರ ಕೈಗೊಂಡಿದ್ದರೆ ಮಂಡನೆ ಮಾಡಲಿ’
-ಸಿ.ಎಂ.ಇಬ್ರಾಹೀಂ ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News