ನಾಲ್ವರು ವಿಚಾರವಾದಿಗಳ ಹತ್ಯೆಗೆ ನಾಲ್ಕು ತಂಡ?

Update: 2018-06-18 13:45 GMT
ದಾಭೋಲ್ಕರ್, ಕಲಬುರ್ಗಿ, ಗೌರಿ ಲಂಕೇಶ್, ಗೋವಿಂದ ಪನ್ಸಾರೆ

ಬೆಂಗಳೂರು, ಜೂ.18: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತ ಆರೋಪಿ ಪರಶುರಾಮ್ ವಾಗ್ಮೋರೆ ವಿಚಾರಣೆಯನ್ನು ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳು ತೀವ್ರಗೊಳಿಸಿದ್ದು, ನಾಲ್ವರು ವಿಚಾರವಾದಿಗಳ ಹತ್ಯೆಗೆ ಪ್ರತ್ಯೇಕ ತಂಡಗಳನ್ನು ಕಟ್ಟಿಕೊಳ್ಳಲಾಗಿತ್ತು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕರ್, ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ಸಂಬಂಧ ನಾಲ್ಕು ಪ್ರತ್ಯೇಕ ತಂಡಗಳನ್ನು ಕಟ್ಟಿಕೊಂಡ ದುಷ್ಕರ್ಮಿಗಳು, ಸಂಚು ರೂಪಿಸಿ ಹತ್ಯೆಗೈದಿರುವ ಮಾಹಿತಿಯು ಬಂಧಿತ ಆರೋಪಿ ವಾಗ್ಮೋರೆಯನ್ನು ವಿಚಾರಣೆಗೊಳಪಡಿಸಿದಾಗ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಮಾದರಿಯಲ್ಲಿಯೇ ಇನ್ನುಳಿದ ವಿಚಾರವಾದಿಗಳನ್ನು ಕೊಲೆ ಮಾಡಲಾಗಿದೆ. ಆದರೆ, ದುಷ್ಕರ್ಮಿಗಳಿಗೆ ಪಿಸ್ತೂಲು ಪೂರೈಸುತ್ತಿದ್ದ ನಾಯಕ ಯಾರೆಂದು ಇದುವರೆಗೂ ಪತ್ತೆಯಾಗಿಲ್ಲ. ಆತನ ಪತ್ತೆಗಾಗಿ ವಿಚಾರಣೆ ಮುಂದುವರೆಸಲಾಗಿದ್ದು, ಹೊರ ರಾಜ್ಯಗಳಲ್ಲೂ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಟ್ ತನಿಖಾ ಮೂಲಗಳು ತಿಳಿಸಿವೆ.

ಒಬ್ಬನೇ ಮುಖ್ಯಸ್ಥ: ವಿಚಾರವಾದಿಗಳ ಕೊಲೆ ಮಾಡಿರುವ ಪ್ರಕರಣಗಳ ಹಿಂದೆ ಓರ್ವ ಮುಖ್ಯಸ್ಥ ಹಾಗೂ ಸಂಸ್ಥೆಯೊಂದರ ನೇರ ಕೈವಾಡವಿದ್ದು, ಅವರ ಬಗ್ಗೆ ಇನ್ನೂ ಸುಳಿವು ದೊರೆತಿಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಈ ತಂಡ ಕಾರ್ಯನಿರ್ವಹಿಸುತ್ತಿದ್ದು, ಇತರೆ ವಿಚಾರವಾದಿಗಳ ಕೊಲೆಗೂ ಸಂಚು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಅರ್ಜಿ ವಿಚಾರಣೆ ಮುಂದೂಡಿಕೆ
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಎನ್ನಲಾದ ಹಿಂದುತ್ವ ಸಂಘಟನೆ ಮುಖ್ಯಸ್ಥ ಕೆ.ಟಿ.ನವೀನ್ ಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ನಗರದ 70ನೇ ಸಿಸಿಎಚ್ ಕೋರ್ಟ್ ಜೂ.21ಕ್ಕೆ ಮುಂದೂಡಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News