×
Ad

ಮಡಿಕೇರಿ ಅಬ್ಬಿ ಫಾಲ್ಸ್‌ನಲ್ಲಿ ಹೆಣ್ಣು ಮಗು ನಾಪತ್ತೆ: ಬಳಿಕ ನಡೆದದ್ದೇನು ?

Update: 2018-06-18 20:24 IST

ಮಡಿಕೇರಿ, ಜೂ.18: ಮಡಿಕೇರಿಯ ಅಬ್ಬಿ ಫಾಲ್ಸ್‌ನಲ್ಲಿ ಹೆತ್ತವರಿಂದ ಆಕಸ್ಮಿಕವಾಗಿ ಬೇರ್ಪಟ್ಟ ನಾಲ್ಕೂವರೆ ವರ್ಷದ ಹೆಣ್ಣು ಮಗು ಪೊಲೀಸ್ ಹಾಗೂ ಸ್ಥಳೀಯರ ಸಹಕಾರದಿಂದ ಹೆತ್ತವರವನ್ನು ಸೇರಿದೆ ಎಂದು ಮಡಿಕೇರಿ ಪೊಲೀಸರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಮಡಿಕೇರಿ ಅಬ್ಬಿ ಫಾಲ್ಸ್‌ಗೆ ಪ್ರವಾಸಕ್ಕೆ ಬಂದ ಹೆಣ್ಣು ಮಗುವೊಂದು ಹೆತ್ತವರಿಂದ ಬೇರ್ಪಟ್ಟಿರುವ ಬಗ್ಗೆ ಮಗುವಿನ ಫೋಟೊ ಸಹಿತ ಆಡಿಯೊ ಎರಡು ದಿನಗಳಿಂದ ವಾಟ್ಸ್‌ಆ್ಯಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಡಿಕೇರಿ ಪೊಲೀಸರನ್ನು ಸಂಪರ್ಕಿಸಿದಾಗ, ಹೆತ್ತವರಿಂದ ಬೇರ್ಪಟ್ಟ ಮಗುವನ್ನು ಹುಡುಕಿಕೊಂಡು ಬಂದ ಆಕೆಯ ಹೆತ್ತವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ಬೆಳಗ್ಗೆ ಕಾರಿನಲ್ಲಿ ಅಬ್ಬಿ ಫಾಲ್ಸ್‌ಗೆ ಬಂದಿದ್ದ ಮಂಗಳೂರು ಮೂಲದ ಕುಟುಂಬವೊಂದು ಫಾಲ್ಸ್‌ನಲ್ಲಿ ಕೆಲವು ಸಮಯ ಕಳೆದು ಬಳಿಕ ಮಧ್ಯಾಹ್ನದ ವೇಳೆ ಬೇರೆ ಕಡೆಗೆ ತೆರಳಿತ್ತು. ಕುಟುಂಬದ ಜೊತೆ ಇದ್ದ ಆರು ಮಕ್ಕಳಲ್ಲಿ ಮೂರು ಮಕ್ಕಳು ಮಂಗಳೂರಿನಿಂದ ಹೊರಡುವಾಗ ಕಾರಿನ ಹಿಂದಿನ ಸೀಟ್‌ನಲ್ಲಿ ಕುಳಿತ್ತಿದ್ದರು. ಈ ಹಿನ್ನೆಲೆಯಲ್ಲಿ ಅಬ್ಬಿ ಫಾಲ್ಸ್‌ನಿಂದ ಮರಳುವಾಗ ಮಗು ಕುಟುಂಬದಿಂದ ಬೇರ್ಪಟ್ಟಿರುವುದು ಕಾರಿನಲ್ಲಿದ್ದ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.

ಅಬ್ಬಿ ಫಾಲ್ಸ್‌ನಿಂದ ಹೊರಟ ಕುಟುಂಬ ಸುಮಾರು ಒಂದು ಗಂಟೆ ಪ್ರಯಾಣ ಬೆಳೆಸಿತ್ತು. ಮಕ್ಕಳಿಗೆ ತಿಂಡಿ ಹಂಚುವಾಗ ಮಗು ನಾಪತ್ತೆಯಾಗಿರುವುದು ಕುಟುಂಬದ ಗಮನಕ್ಕೆ ಬಂದಿದೆ. ಕೂಡಲೇ ಕಾರು ತಿರುಗಿಸಿ ಅಬ್ಬಿ ಫಾಲ್ಸ್ ಕಡೆಗೆ ಬಂದ ಕುಟುಂಬ ಮಗುವನ್ನು ಕರೆದುಕೊಂಡು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದಿಂದ ಬೇರ್ಪಟ್ಟ ಮಗು ತಾಸಿನೊಳಗೆ ಹೆತ್ತವರನ್ನು ಸೇರಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಫೋಟೊ ಹಾಗೂ ಆಡಿಯೊ ವೈರಲ್ ಆಗುತ್ತಿರುವುದು ಇನ್ನೂ ನಿಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News