×
Ad

ಕಾವೇರಿ ಐದನೇ ಹಂತದ ಯೋಜನೆಗೆ ಸಿದ್ಧತೆ: ಡಾ.ಜಿ.ಪರಮೇಶ್ವರ್

Update: 2018-06-18 21:08 IST

ಬೆಂಗಳೂರು, ಜೂ.18: ರಾಜಧಾನಿ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ನಗರದ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ನೀರಿನ ಲಭ್ಯತೆ ಆಧಾರದಲ್ಲಿ ಕಾವೇರಿ ಐದನೆ ಹಂತದ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಕಾವೇರಿ ಐದನೆ ಹಂತವೇ ಕೊನೆಯ ಯೋಜನೆಯಾಗಲಿದೆ. ಇದಲ್ಲದೆ, ಎತ್ತಿನಹೊಳೆ ಯೋಜನೆಯಿಂದಲೂ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಅಲ್ಲದೆ, ಲಿಂಗನಮಕ್ಕಿಯಿಂದಲೂ ನೀರು ತರಲು ಚಿಂತಿಸಲಾಗಿದೆ. ಈ ಸಂಬಂಧ ಡಿಪಿಆರ್ ತಯಾರಿಸಲು ತಿಳಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಇನ್ನು ಮುಂದೆ ಬೋರ್‌ವೆಲ್‌ಗಳನ್ನು ಕೊರೆಸುವುದನ್ನು ನಿರ್ಬಂಧಿಸುವ ಕುರಿತು ಸಭೆಯಲ್ಲಿ ಚರ್ಚಿಸಿದ್ದೇವೆ. ಅಲ್ಲದೆ, ಮನೆ ನಿರ್ಮಾಣ ಪರವಾನಿಗೆ ನೀಡಲು ಮಳೆ ನೀರು ಕೊಯ್ಲು ಕಡ್ಡಾಯ ಮಾಡಿರುವುದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡುವಂತೆ ಶಾಸಕರು ಮನವಿ ಮಾಡಿದ್ದಾರೆ. ಬೆಂಗಳೂರಿನ ಕೆರೆಗಳು ಸಂಪೂರ್ಣ ಕಲುಷಿತ ಆಗಿವೆ. ಕೆಲ ಕೆರೆಗಳು ಸರಿಪಡಿಸಲು ಆಗದ ಸ್ಥಿತಿಗೆ ತಲುಪಿವೆ. ಕೆರೆಗಳ ಮಾಲಿನ್ಯ ತಡೆದು ಅಭಿವೃದ್ಧಿ ಮಾಡಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಮನೆ ಬಳಿ ಹಾವು, ಚೇಳು ಕಾಟದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿದ ಪರಮೇಶ್ವರ್, ಅವರ ಮನೆ ಸುತ್ತ ಮುತ್ತ ಖಾಸಗಿ ನಿವೇಶನಗಳಿವೆ. ಇನ್ನೊಂದು ಸಿಎ ನಿವೇಶನವಿದ್ದು, ಅದನ್ನು ಒಂದು ಸಂಸ್ಥೆಗೆ ಕೊಡಲಾಗಿದೆ ಎಂದರು.

ಆ ನಿವೇಶನಗಳ ವಾರಸುದಾರರು ಅವುಗಳ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ. ಹೀಗಾಗಿ ಹಾವು ಚೇಳುಗಳು ಸುಳಿದಾಡುತ್ತಿವೆ. ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ಸಮಸ್ಯೆಗೆ ಪರಿಹಾರ ಕಂಡು ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News