×
Ad

ಶಿಕ್ಷಣ ಇಲಾಖೆಯ ದೌರ್ಬಲ್ಯ ಮಕ್ಕಳ ಸಂಖ್ಯೆ ಕ್ಷೀಣಿಸಲು ಕಾರಣ: ಸಚಿವ ಎನ್.ಮಹೇಶ್

Update: 2018-06-18 22:42 IST

ಮೈಸೂರು,ಜೂ.18: ಮಹಾರಾಜ ಶಾಲೆ ಐತಿಹಾಸಿಕ ಹಿನ್ನೆಲೆಯುಳ್ಳ ಶಾಲೆಯಾಗಿದ್ದು, ಇಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಮಕ್ಕಳ ಸಂಖ್ಯೆ ಕಡಿಮೆಯಾಗಲು ಶಿಕ್ಷಣ ಇಲಾಖೆಯಲ್ಲಿನ ದೌರ್ಬಲ್ಯವೇ ಕಾರಣ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅಭಿಪ್ರಾಯಪಟ್ಟರು.

ಮೈಸೂರಿನ ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಗೆ ಸೋಮವಾರ ದಿಢೀರ್ ಭೇಟಿ ನೀಡಿದ ಅವರು, ಅಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆಯನ್ನು ನೋಡಿ ಅವಾಕ್ಕಾದರು. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿ, 180 ವರ್ಷಗಳ ಇತಿಹಾಸವಿರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕಟ್ಟಿದಂತಹ ಶಾಲೆಯಿದು. ಆಗಲೇ 700-800ರಷ್ಟು ಮಕ್ಕಳಿದ್ದರು. ಇದೀಗ 120ಕ್ಕೆ ಬಂದು ನಿಂತಿರುವುದು ವಿಪರ್ಯಾಸ. ನನ್ನ ಮಗ ಕೂಡ ಇಲ್ಲಿಯೇ ಪಿಯುಸಿ ಓದಿದ್ದು. ಖಾಸಗಿ ಶಾಲೆಗಳಲ್ಲಿ ಇರದ ಸೌಲಭ್ಯಗಳೂ ಕೂಡ ಇಲ್ಲಿದೆ. ಆದರೆ ಮಕ್ಕಳ ಸಂಖ್ಯೆ ಮಾತ್ರ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಕಾರಣ ಶಿಕ್ಷಣ ಇಲಾಖೆಯಲ್ಲಿನ ದೌರ್ಬಲ್ಯ ಎಂದು ಅಭಿಪ್ರಾಯಪಟ್ಟರು.

ಸುಮಾರು ಶೇ.60 ಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಗಳತ್ತ  ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಖುದ್ದು ಪ್ರೌಢಶಾಲೆಯ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಸೆಳೆಯಬೇಕು. ಮಕ್ಕಳಿಗೆ ಸರ್ವ ಶಿಕ್ಷಣ ಅಭಿಯಾನದಡಿ ಖಾಸಗಿ ಶಾಲೆಯಂತೆ ಬಸ್ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗುವುದು. ನನ್ನ ಮಾಹಿತಿ ಪ್ರಕಾರ ಖಾಸಗಿ ಶಾಲೆಯ ಶಿಕ್ಷಕರಿಗಿಂತ ಸರ್ಕಾರಿ ಶಾಲೆಯ ಶಿಕ್ಷಕರು ಉತ್ತಮ ಸಿಇಟಿ ಬರೆದು ಆಯ್ಕೆ ಆಗಿದ್ದು ಉತ್ತಮ ಶಿಕ್ಷಣ ನೀಡುತ್ತಾರೆ. ಮಂತ್ರಿಗಳು ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ  ಸೇರಿಸಲು ಮನಸ್ಸು ಮಾಡಬೇಕು. ಕನ್ನಡ ಮಾಧ್ಯಮದೊಳಗೆ ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸಲು ಯತ್ನ ಮಾಡಬೇಕು. ಖಾಸಗಿ ಶಾಲೆಗಳಿಗಿಂತ ಹೆಚ್ಚು ಆಕರ್ಷಣೀಯವಾಗಿಡಬೇಕು ಆಗ ಮಕ್ಕಳು ಬರುತ್ತಾರೆ ಎಂದರು.

ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಮಕ್ಕಳ ಪೋಷಕರನ್ನು ಬುಕ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ವಿಚಾರ ಮಾಧ್ಯಮಗಳ ಮೂಲಕ ನನಗೆ ಗೊತ್ತಾಗಿದೆ. ಅದು ಒಂದು ವಿಚಿತ್ರ ಸಂಗತಿ, ಈ ಬಗ್ಗೆ ಗಮನ ಹರಿಸುತ್ತೇನೆ ಎಂದರು.

ಶಾಲಾ ಶಿಕ್ಷಕರ ಮೇಲೆ ಒತ್ತಡಗಳು ಹೆಚ್ಚಾಗುತ್ತಿವೆ ಎನ್ನುವ ವಿಚಾರ ತಿಳಿದಿದೆ. ಒತ್ತಡ ಕಡಿಮೆ ಮಾಡಿ ಉತ್ತಮ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲು ಕ್ರಮ ಜರುಗಿಸಲಾಗುವುದು. ಎನ್.ಜಿ.ಓ.ಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ತಜ್ಞರ ಜೊತೆ ಮಾತನಾಡಿ ಕಾರ್ಯಾಗಾರ ನಡೆಸಿ ಶಿಕ್ಷಕರಿಗೆ ಪಾಠ ಮಾಡಲು ಪೂರಕ ವಾತಾವರಣ ಕಲ್ಪಿಸಲಾಗುವುದು. ಅವರಿಗೆ ಬೇರೆ ಬೇರೆ ಕೆಲಸದ ಒತ್ತಡದಲ್ಲಿ ಮಕ್ಕಳಿಗೆ ನ್ಯಾಯ ಒದಗಿಸಲಾಗುತ್ತಿಲ್ಲ ಎಂದರು.

ನಮ್ಮ ಮೊದಲ ಆದ್ಯತೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವುದಾಗಿದ್ದು, ಅತ್ತ ಗಮನ ಹರಿಸುತ್ತೇವೆ ಎಂದರು. ಮಕ್ಕಳ ದಾಖಲಾತಿ, ಶಾಲಾ ಶಿಥಿಲ ಕೊಠಡಿಗಳ ಪುನರ್ ನಿರ್ಮಾಣ ಕಾರ್ಯವನ್ನು ಪರಿಶೀಲನೆ ನಡೆಸಿದರು. ಸುಮಾರು ನೂರ ಮೂವತ್ತು ವರ್ಷ ಪೂರೈಸಿರುವ ಕೊಠಡಿ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ. ಕೊಠಡಿಗಳ ಪುನರ್ ನಿರ್ಮಾಣವನ್ನು ಉತ್ತಮವಾಗಿ ಮಾಡುವಂತೆ ಇದೇ ವೇಳೆ ಸೂಚನೆ ನೀಡಿದರು. ಕೊಠಡಿಗಳ ಕಾಮಗಾರಿ ಜತೆಗೆ ಮಕ್ಕಳ ದಾಖಲಾತಿಯನ್ನೂ ಪರಿಶೀಲನೆ ನಡೆಸಿದರು. ತರಗತಿಗಳಿಗೆ ತೆರಳಿ ಮಕ್ಕಳ ಜತೆ ಮಾತನಾಡಿದರು.

ಗಾಂಧೀಜಿ ಬಗ್ಗೆ ಅಪಾರ ಗೌರವ:

ತಮ್ಮ ಸಚಿವಾಲಯದ ಕಛೇರಿಯಲ್ಲಿ ಗಾಂಧೀಜಿ ಫೋಟೋ ತೆಗೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಅಧಿಕಾರ ಸ್ವೀಕರಿಸಿದ ಬಳಿಕ ಕಚೇರಿಯಲ್ಲಿ ಇದ್ದ ಎಲ್ಲಾ ಫೋಟೋಗಳನ್ನ ತೆಗೆದು ಇಟ್ಟಿದ್ದರು. ಇದು ಅಕಸ್ಮಾತ್ತಾಗಿ ನನ್ನ ಅರಿವಿಗೆ ಬರದಂತೆ ಆಗಿರುವ ಘಟನೆ. ನಾನು ಕೊಠಡಿ ಪ್ರವೇಶ ಮಾಡಿದ ದಿನ ಬುದ್ಧ ಬಸವ ಅಂಬೇಡ್ಕರ್ ಫೋಟೋ ಇಟ್ಟು ಪೂಜೆ ಮಾಡಿದೆ. ಸದ್ಯ ಪ್ರೋಟೋಕಾಲ್ ಪ್ರಕಾರ ಎಲ್ಲರ ಫೋಟೋ ಇಡಲಾಗಿದೆ. ನನಗೆ ಗಾಂಧಿಯವರ ಬಗ್ಗೆ ಅಪಾರ ಗೌರವ ಇದೆ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಎಂದು ಸ್ಪಷ್ಟನೆ ನೀಡಿದರು.

ಪ್ರೌಢಶಾಲಾ ವಿದ್ಯಾರ್ಥಿಗಳ ಸಮವಸ್ತ್ರ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಜಗದೀಶ್ ಶೆಟ್ಟರ್ ಆರೋಪ ಕುರಿತು ಪ್ರತಿಕ್ರಿಯಿಸಿ, ನನಗೆ ಆ ಕುರಿತು ತಿಳಿದಿಲ್ಲ. ಕಡತ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು. ಸಚಿವರ ಜೊತೆ ಡಿಡಿಪಿಐ ಮಮತಾ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News