ಮೈಸೂರು: ರೈತರ ಸಾಲ ಮನ್ನಾ ಬಗ್ಗೆ ಹೇಳಿಕೆ ನೀಡಿದ ಕೃಷಿ ಸಚಿವರ ತಿರುಗಿ ಬಿದ್ದ ರೈತ ಮುಖಂಡರು

Update: 2018-06-18 17:21 GMT

ಮೈಸೂರು,ಜೂ.18: ರೈತರ ಸಾಲಮನ್ನಾ ಮಾಡುವುದಾಗಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಸಭೆಯಲ್ಲಿ ಹೇಳುತ್ತಿದ್ದಂತೆ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಸಚಿವರ ವಿರುದ್ಧ ತಿರುಗಿ ಬಿದ್ದ ಘಟನೆ ನಡೆಯಿತು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ರೈತ ಮುಖಂಡರು ಮತ್ತು ಪ್ರಗತಿಪರ ರೈತರೊಂದಿಗೆ ನಡೆದ ಸಭೆಯಲ್ಲಿ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಪ್ರಾರಂಭ ಮಾಡಿದ ಸಚಿವರು ರೈತರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳುತ್ತಿದ್ದರು. ಇದೇ ವೇಳೆ ರೈತರ ಸಾಲಮನ್ನಾ ಶೀಘ್ರದಲ್ಲೇ ಮಾಡಲಾಗುವುದು ಎಂದು ಹೇಳುತ್ತಿದ್ದಂತೆ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ, ನೀವು ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡಿ.  ಮುಖ್ಯಮಂತ್ರಿಗಳು ಸಭೆ ಕರೆದು 20 ದಿನಗಳಾಯಿತು, ಏನು ಮಾಡಲು ಆಗಲಿಲ್ಲ. ಇನ್ನು ನೀವೇನು ಭರವಸೆ ಕೊಡುವುದು? ನಿಮ್ಮನ್ನು ಸಾಲಮನ್ನಾ ಮಾಡಿ ಎಂದು ಯಾರು ಕೇಳಿರಲಿಲ್ಲ, ನೀವೆ ಘೋಷಣೆ ಮಾಡಿ ರೈತರ ಬದುಕಿನ ಜೊತೆ ಚಲ್ಲಾಟವಾಡುತ್ತಿದ್ದೀರಿ. ನಿಮ್ಮ ಸಭೆಗಳು ರೈತರ ಅನುಕೂಲಕ್ಕಾಗಿ ನಡೆಯುವುದಿಲ್ಲ. ಬರಿ ಕಾಟಾಚಾರದ ಸಭೆಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ರೈತರು ಮತ್ತು ಸಚಿವರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಕೃಷಿ ಆಯೋಗ ಮಾಡಿದರು ರೈತರಿಗೆ ಏನು ಪ್ರಯೋಜವಾಗಲಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡಿ ಎಂದರೂ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆ ಬಂದು ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳು ನಾಶವಾಗಿದೆ. ಅಧಿಕಾರಿಗಳು ಸರಿಯಾಗಿ ಪರಿಹಾರ ನೀಡುವುದಿಲ್ಲ. ಅದರ ಬಗ್ಗೆ ಗಮನ ಹರಿಸಿ. ನಿಮ್ಮನ್ನು ಸಾಲಮನ್ನಾ ಮಾಡಿ ಎಂದು ನಾವು ಕೇಳಿಲ್ಲ ಎಂದು ಹೇಳಿದರು.

ಜಿಲ್ಲೆಗೆ ಒಂದು ಸಿರಿಧಾನ್ಯ ಘಟಕವಿರಬೇಕು. ರೈತರ ಆರೋಗ್ಯದಲ್ಲಿ ಕಾಳಜಿ ಇದ್ದರೆ ಯಶಸ್ವಿನಿ ಕಾರ್ಡ್ ಮತ್ತೆ ಜಾರಿಗೆ ತರಬೇಕು. ಮಂಡ್ಯ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆ ಶೀಘ್ರ ತೆರೆಯಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ವೈಜ್ಞಾನಿಕ ಬೆಲೆ ನೀಡಬೇಕು. ಭತ್ತದ ಖರೀದಿ ಕೇಂದ್ರ ಆದಷ್ಟು ಬೇಗ ಬರಬೇಕು. ರೈತ ಬೆಳೆಯುವ ಧಾನ್ಯ ನಾಡಿನ ಸಂಪತ್ತು. ಮುಖ್ಯಮಂತ್ರಿಯವರು ಇಸ್ರೇಲ್ ಮಾದರಿಯ ಕೃಷಿ ಚಟುವಟಿಕೆ ಅನುಸರಿಸುತ್ತಿರುವುದು ಖುಷಿ ತಂದಿದೆ. ಕೆಆರ್ ಎಸ್ ಡ್ಯಾಮ್ ಈಗ ತುಂಬಿದೆ. ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಆದರೆ ಮೊದಲು ನಮ್ಮ ಜಿಲ್ಲೆಯ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸಿ ನಂತರ ಬೇರೆಯವರಿಗೆ ನೀರು ಬಿಡಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವಶಂಕರ್ ರೆಡ್ಡಿ, ಎಲ್ಲರ ಸಲಹೆಗಳನ್ನು ಅವಗಾಹನೆಗೆ ತೆಗೆದುಕೊಳ್ಳಲಾಗುವುದು. ಕೃಷಿ ಇಲಾಖೆಯಲ್ಲಿ ಸುಮಾರು 600 ಹುದ್ದೆಗಳು ಖಾಲಿ ಇದ್ದು, ಆದಷ್ಟು ಬೇಗ ಆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಎನ್.ಮಹೇಶ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಶಾಸಕರಾದ ಎಚ್.ವಿಶ್ವನಾಥ್, ನರೇಂದ್ರ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. 

ರೈತರ ಮುಖಂಡರಾದ ಹೊಸಕೋಟೆ ಬಸವರಾಜು, ಲೋಕೇಶ್ ರಾಜೇಅರಸ್, ವಿದ್ಯಾಸಾಗರ್, ಕೆಂಬಲ್ ನಾಗಣ್ಣ, ಹೊಸೂರು ಕುಮಾರ್, ಪಿ.ಮರಂಕಯ್ಯ, ನಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News