ತರೀಕೆರೆ: ಕೊಬ್ಬರಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ ಪ್ರಾಣಾಪಾಯದಿಂದ ಪಾರು
ತರೀಕೆರೆ, ಜೂ.19: ಅರಸೀಕೆರೆಯಿಂದ ಮಹಾರಾಷ್ಟ್ರಕ್ಕೆ ಕೊಬ್ಬರಿ ಸಾಗಿಸುತ್ತಿದ್ದ ಲಾರಿಯೊಂದು ಸೇತುವೆ ಒಂದಕ್ಕೆ ಢಿಕ್ಕಿ ಹೊಡೆದು, ಪಲ್ಟಿಯಾಗಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವ ಘಟನೆ ಮಂಗಳವಾರ ತರೀಕೆರೆ ಪಟ್ಟಣದ ಆರ್‍ಎಂಸಿ ಯಾರ್ಡ್ ಬಳಿ ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಮಂಗಳವಾರ ಬೆಳಗಿನಜಾವ ಅರಸೀಕೆರೆಯಿಂದ ಕೊಬ್ಬರಿ ತುಂಬಿಕೊಂಡು ತರೀಕೆರೆ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ತರೀಕೆರೆ ಪಟ್ಟಣದ ಆರ್‍ಎಂಸಿ ಯಾರ್ಡ್ ಸಮೀಪದ ಸೇತುವೆಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಲಾರಿ ಎರಡು ಪಲ್ಟಿಯಾಗಿದ್ದು, ಲಾರಿಯ ಎಲ್ಲ ಟೈರ್ ಗಳು ಕಳಚಿಕೊಂಡಿದ್ದು, ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಲಾರಿಯಲ್ಲಿ ಲಕ್ಷಾಂತರ ರೂ ಮೌಲ್ಯದ ಕೊಬ್ಬರಿ ಮೂಟೆಗಳಿದ್ದು, ಎಲ್ಲವೂ ರಸ್ತೆಗೆ ಚೆಲ್ಲಲ್ಪಟ್ಟಿವೆ. ಘಟನೆಯಲ್ಲಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದು ಬಂದಿದೆ. ತರೀಕೆರೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.