ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೊಂದು ದೂರು ದಾಖಲು

Update: 2018-06-19 15:06 GMT

ಬೆಂಗಳೂರು, ಜೂ.19: ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಐಟಿ ಅಧಿಕಾರಿಗಳು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಮತ್ತೊಂದು ದೂರು ನೀಡಿದ್ದಾರೆ.

2017ರಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿವಾಸ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ನಂತರ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ವಿಚಾರಣೆ ವೇಳೆ ಶಿವಕುಮಾರ್ ಐಟಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿರುವುದು ತನಿಖೆಯಲ್ಲಿ ತಿಳಿದು ಬಂದಿತ್ತು.

ಈ ಹಿನ್ನೆಲೆಯಲ್ಲಿ ಸೋಮವಾರ ಐಟಿ ತನಿಖಾಧಿಕಾರಿಗಳು ಸಾಕ್ಷಿ ಸಮೇತ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಡಿಕೆಶಿ ವಿರುದ್ಧ ದೂರು ನೀಡಿದ್ದಾರೆ. ಐಟಿ ಕಾಯ್ದೆ ಸೆಕ್ಷನ್ 277, 278, 193, 199, ಹಾಗೂ 120(ಬಿ)ಅಡಿ ದೂರು ದಾಖಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಆರ್ಥಿಕ ಅಪರಾಧಗಳ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್ ಆಳ್ವ, ಆಗಸ್ಟ್ 2ರಂದು ಡಿಕೆಶಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ. ಸಚಿವರ ಜತೆ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಅವರೂ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News