ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡುತ್ತೇನೆ: ಸಚಿವ ಎನ್.ಮಹೇಶ್

Update: 2018-06-19 15:08 GMT

ಬೆಂಗಳೂರು, ಜೂ.19: ಎಲ್ಲ ರೀತಿಯ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡುತ್ತೇನೆ. ಆದರೆ, ಪಾದುಕೆ ಪೂಜೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.

ಮಂಗಳವಾರ ನೃಪತುಂಗ ರಸ್ತೆಯ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯ ಸಂದರ್ಭದಲ್ಲಿ ಜನರ ಭಾವನೆಗಳಿಗೆ ಬೆಲೆ ನೀಡಿ ಪಾದುಕೆ ಪೂಜೆಯನ್ನು ಮಾಡಿರುವುದು ನಿಜ. ಅಲ್ಲದೆ, ಅದು ಚರ್ಮದ್ದು ಅಲ್ಲ, ಮರದ್ದು ಎಂದು ತಿಳಿಸಿದರು.
ಕೊಳ್ಳೇಗಾಲದ ದೇವಾಂಗಪೇಟೆಯಲ್ಲಿ ಅಮ್ಮಾ ಭಗವಾನ್ ಅವರ ಪಾದುಕೆ ಪೂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಜನರು ಅಲ್ಲಿಗೆ ಬರುವಂತೆ ಬೇಡಿಕೆಯಿಟ್ಟಾಗ ಆ ಪಾದ ಪೂಜೆಗೆ ಹೋಗಿದ್ದು ನಿಜ. ಅಲ್ಲಿ ಮರದ ಎರಡು ಪಾದುಕೆಗಳನ್ನು ಇಟ್ಟಿದ್ದರು. ಆ ಮರದ ಪಾದುಕೆಗಳನ್ನು ಇಟ್ಟುಕೊಂಡು ಪೂಜೆ ಮಾಡಿ ಅಣ್ಣಾ ಎಂದು ಊರಿನವರೆಲ್ಲರೂ ಕೇಳಿಕೊಂಡರು. ಅವರ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಬಾರದು ಎನ್ನುವ ಕಾರಣಕ್ಕಾಗಿ ನಾನು ಅವರ ಮಾತಿಗೆ ಬೆಲೆ ನೀಡಿದೆ ಎಂದರು.

ನಾನು ಎಲ್ಲಾ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡುವವನು ಮತ್ತು ನಾನು ಯಾವುದೇ ಧರ್ಮಕ್ಕೆ ಸೇರಿದವನೂ ಅಲ್ಲ. ಆಯಾಯ ಸಮುದಾಯದ ಧಾರ್ಮಿಕ ಭಾವನೆಗಳನ್ನು ನಾನು ಗೌರವಿಸಿದ್ದೇನೆ ಅಷ್ಟೆ ಎಂದು ಮಹೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News