ಹೇಮಾವತಿ ಜಲಾಶಯದ ನೀರು ಮನೆಗಳಿಗೆ ನುಗ್ಗಿದರೆ ಸೂಕ್ತ ಪರಿಹಾರ: ಹೈಕೋರ್ಟ್

Update: 2018-06-19 15:10 GMT

ಬೆಂಗಳೂರು, ಜೂ.19: ಹೇಮಾವತಿ ಜಲಾಶಯದ ಹೆಚ್ಚುವರಿ ನೀರು ಬಿಡುಗಡೆ ಮಾಡಿದ ವೇಳೆ ಹಾನಿಗೆ ಗುರಿಯಾಗುತ್ತಿರುವ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಂಪನಹಳ್ಳಿ ಗ್ರಾಮದ ಮನೆಗಳನ್ನು ಪರಿಶೀಲನೆ ನಡೆಸಬೇಕೆಂದು ಕಾವೇರಿ ನೀರಾವರಿ ನಿಗಮ ಮತ್ತು ಹೇಮಾವತಿ ನೀರಾವರಿ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಹೇಮಾವತಿ ಜಲಾಶಯ ತುಂಬಿದಾಗ ಹೆಚ್ಚುವರಿ ನೀರನ್ನು ಹೊರಗೆ ಬಿಡುಗಡೆ ಮಾಡಲಾಗುತ್ತದೆ. ಆ ನೀರು ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಮನೆ ಕಟ್ಟಡವು ಹಾನಿಗೆ ಗುರಿಯಾಗುತ್ತಿದೆ. ಹೀಗಾಗಿ, ನಮ್ಮ ಮನೆಗಳನ್ನು ತೆರವುಗೊಳಿಸಿ ಬೇರಡೆ ಪುನರ್ವಸತಿ ಕಲ್ಪಿಸಲು ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಹಂಪನಹಳ್ಳಿ ಗ್ರಾಮದ ಜವರೇಗೌಡ ಹಾಗೂ ಇತರೆ 13 ಮಂದಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಹೇಮಾವತಿ ನೀರಾವರಿ ಯೋಜನೆ-2ರ ವಿಶೇಷ ಭೂ ಸ್ವಾಧೀನ ಅಧಿಕಾರಿ, ಕಾವೇರಿ ನೀರಾವರಿ ನಿಗಮ ಮತ್ತು ಉನ್ನತ ಮಟ್ಟದ ಸಮಿತಿಯ ಪ್ರಾದೇಶಿಕ ಆಯುಕ್ತರು ಅರ್ಜಿದಾರರ ಮನೆಗಳಿಗೆ ಭೇಟಿ ನೀಡಬೇಕು. ಹೇಮಾವತಿ ಜಲಾಶಯದಿಂದ ಬಿಡುಗಡೆ ಮಾಡುವ ನೀರು, ಅರ್ಜಿದಾರರ ಮನೆಗಳಿಗೆ ನೀರು ನುಗ್ಗುತ್ತಿದೆಯೇ? ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು. ಅಲ್ಲದೆ, ಒಂದು ವೇಳೆ ನೀರು ನುಗ್ಗಿ ಮನೆಗಳು ಹಾನಿಯಾಗಿರುವುದು ದೃಢಪಟ್ಟರೆ ಕಾನೂನು ಪ್ರಕಾರ ಅರ್ಜಿದಾರರಿಗೆ ಸೂಕ್ತ ಪರಿಹಾರ ಧನ ವಿತರಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News