ಸ್ವಚ್ಛತೆ ಬಗ್ಗೆ ಶಿಕ್ಷಕರೇ ಜನತೆಗೆ ಅರಿವು ಮೂಡಿಸಬೇಕು: ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್

Update: 2018-06-19 16:36 GMT

ಬೀರೂರು, ಜೂ.19: ಸರಕಾರಿ ಶಾಲಾ ಕಾಲೇಜುಗಳ ಸ್ವಚ್ಚತೆಯಲ್ಲಿ ಶಾಲಾ ಮುಖ್ಯೋಪಾಧ್ಯಯರು ಮತ್ತು ಶಾಲಾ ಅಧ್ಯಾಪಕರೇ ಕಾಳಜಿ ತೆಗೆದುಕೊಂಡು ಮಕ್ಕಳ ಆರೋಗ್ಯದಲ್ಲಿ ಕೆಟ್ಟ ಪರಿಣಾಮ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್ ಹೇಳಿದರು.

ಅವರು ಮಂಗಳವಾರ ಪುರಸಭೆ ಸಭಾಂಗಣದಲ್ಲಿ ಸ್ವಚ್ಚತೆ ಮತ್ತು ನೀರು ಸರಬರಾಜು ಕುರಿತು ಶಾಲಾ ಕಾಲೇಜಿನ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಯರ ಸಭೆಯಲ್ಲಿ ಮಾತನಾಡಿದರು. ಶಾಲೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಂಡು ಮಕ್ಕಳು ಕುಡಿಯುವ ನೀರಿನಲ್ಲಿ ಶುಚಿತ್ವವನ್ನು ಕಾಪಾಡಿದಾಗ ಮಾತ್ರ ಮಕ್ಕಳ ಆರೋಗ್ಯ ಹದಗೆಡದೆ ಇರುತ್ತದೆ. ಶಾಲೆಯಿರುವ ಬೀದಿಗಳಲ್ಲಿನ ಸಾರ್ವಜನಿಕರು ಶಾಲೆಯ ಆವರಣವನ್ನು ಕಸ ಹಾಕುವುದರ ಮೂಲಕ ಸ್ವಚ್ಚತೆಯನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಶಿಕ್ಷಕರುಗಳಾದ ನೀವು ಮಕ್ಕಳ ಜೊತೆಯಲ್ಲಿ ಸಾರ್ವಜನಿಕರಿಗೂ ಸಹ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಹಲವು ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಮುಖ್ಯೋಪಾದ್ಯಯರು ಮಾತನಾಡಿ ಶಾಲೆಯ ಆವರಣದಲ್ಲಿ ಸುತ್ತಮುತ್ತಲಿನ ಜನತೆ ಸ್ವಚ್ಚತೆಯನ್ನು ನಾಶ ಮಾಡುತ್ತಿದ್ದಾರೆ. ಅದರ ಜೊತೆ ಚರಂಡಿಗಳನ್ನು ಸ್ವಚ್ಚ ಮಾಡಲು ಬರುವ ಪೌರ ಕಾರ್ಮಿಕರು ಸರಿಯಾಗಿ ಬರುತ್ತಿಲ್ಲ, ಭದ್ರಾ ಕುಡಿಯುವ ನೀರು ಸರಿಯಾದ ಸಂಪರ್ಕವಿಲ್ಲದೆ ನೀರಿನ ಸಮಸ್ಯೆಯೂ ಎದುರಾಗಿದೆ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಮಾತನಾಡಿ, ಮೊದಲೇ ಹೇಳಿದಂತೆ ಸ್ವಚ್ಚತೆಯನ್ನು ಒಬ್ಬರಿಂದ ಕಾಪಾಡಲು ಸಾಧ್ಯವಿಲ್ಲ. ಶಿಕ್ಷಕರುಗಳಾದ ತಾವುಗಳು ಜನತೆಗೆ ಅರಿವು ಮೂಡಿಸಬೇಕಿದೆ. ಮಕ್ಕಳ ಆರೋಗ್ಯ ಎಲ್ಲರ ಜವಾಬ್ದಾರಿಯಾಗಿದೆ. ಚರಂಡಿ ಸ್ವಚ್ಚತೆಗೆಂದು ಪೌರಕಾರ್ಮಿಕರಿಂದ ಗುಂಪು ಕೆಲಸವನ್ನು ಮಾಡಿಸುತ್ತಿದ್ದೇವೆ. ಒಂದಾದ ಮೇಲೆ ಒಂದರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಕಸ ವಿಲೇವಾರಿಗೆಂದು ಆಟೋ ಟಿಪ್ಪರ್‍ಗಳು ಬೀದಿಗಳಲ್ಲಿ ಸಂಗೀತ ಸಮೇತವಾಗಿ ಬರುತ್ತಿವೆ. ಜನತೆ ಆ ಕಸದ ಗಾಡಿಗಳಿಗೆ ಕಸ ನೀಡಿ ಸ್ವಚ್ಚತೆಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕಾಗಿದೆ ಎಂದರು.

ಉಪ್ಪಾರ ಕ್ಯಾಂಪ್ ಶಾಲೆಯ ಮುಖ್ಯೋಪಾಧ್ಯಯ ಮಾತನಾಡಿ, ಮಕ್ಕಳನ್ನು ಶೌಚಾಲಯದಲ್ಲಿ ಸ್ವಚ್ಚ ಮಾಡಿಸುವುದಕ್ಕೆ ನೇಮಿಸುವುದು ಅಪರಾಧ ಆದರೆ ಶೌಚಾಲಯ ಸ್ವಚ್ಚ ಮಾಡಲೇಬೇಕು  ಶೌಚಾಲಯವನ್ನು ಸ್ವಚ್ಚ ಮಾಡಲು ನೌಕರರಿಲ್ಲದ ಕಾರಣ ಶುಚಿತ್ವವನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಪುರಸಭೆಯಿಂದ ಒಬ್ಬ ಪೌರಕಾರ್ಮಿಕರನ್ನು ನೀಡಿದರೆ ಶಾಲೆಯ ಶೌಚಾಲಯವನ್ನು ಸ್ವಚ್ಚ ಮಾಡಲು ಅನುಕೂಲವಾಗುತ್ತದೆ. ಮತ್ತು ಬಂದ ಕಾರ್ಮಿಕನಿಗೆ ನಮ್ಮ ಶಾಲೆ ಪರವಾgiಯೇ ಹಣ ಸಂದಾಯ ಮಾಡುತ್ತೇವೆ ಎಂದರು.

ಪರಿಸರ ಅಭಿಯಂತರ ನೂರುದ್ದೀನ್ ಮಾತನಾಡಿ, ಮಕ್ಕಳು ಮಾತ್ರವಲ್ಲ ಪೌರಕಾರ್ಮಿಕರಿಂದ ಮಾಡಿಸಿದರೆ ಅದು ಕೂಡ ಅಪರಾಧ. ಆದರೆ ಶೌಚಾಲಯ ಸ್ವಚ್ಚ ಮಾಡಲು ಇಚ್ಚೆ ಇರುವಂತ ನಿವೃತ್ತ ಪೌರಕಾರ್ಮಿಕರನ್ನು ವಿಚಾರಿಸಿ ಶಾಲೆಯ ಶೌಚಾಲಯದ ಸ್ವಚ್ಚತೆಗೆ ಕಳಿಸುವುದಾಗಿ ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಒಳ್ಳೆಯ ವಾತಾವರಣದಲ್ಲಿ ಮಗು ಬೆಳೆದು ವಿಧ್ಯಾಭ್ಯಾಸವನ್ನು ಕಲಿತರೆ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯಾಗುತ್ತಾನೆ. ಅವನನ್ನು ಉತ್ತಮ ಪ್ರಜೆಯಾಗಿ ಮಾಡುವ ಶಕ್ತಿ ಶಿಕ್ಷಕರದ್ದಾಗಿದೆ. ಶಿಕ್ಷಕ ಮನಸ್ಸು ಮಾಡಿದರೆ ಸಮಾಜದಲ್ಲಿ ಅರಿವು ಮೂಡಿಸುವುದು ಕಷ್ಟಕರವೇನಲ್ಲ, ಶಿಕ್ಷಕರಿಂದ ಸ್ವಚ್ಚತೆ ಮತ್ತು ನೀರಿನ ಬಗ್ಗೆ ಜನತೆಗೆ ತಿಳಿಸಬೇಕು ಎಂದು ಮನವಿ ಮಾಡಿದರು. ನೀರಿನ ಸಮಸ್ಯೆಯಿರುವ ಪ್ರತಿಯೊಂದು ಶಾಲೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ನೀರು ಸರಬರಾಜು ನಿರ್ವಾಹಕ ಮಹೇಶಣ್ಣನವರಿಗೆ ಆದೇಶಿಸಿದರು. 

ಸಭೆಯಲ್ಲಿ ಮುಖ್ಯಾಧಿಕಾರಿ ಮಂಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕುಮಾರ್, ವ್ಯವಸ್ಥಾಪಕ ನಂಜಂಡ ಶೆಟ್ಟಿ, ಹಾಗೂ ಪುರಸಭೆ ಅಧಿಕಾರಿಗಳು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News