ಜೆಡಿಎಸ್‍ಗೆ ಕುರ್ಚಿ ಉಳಿಸಿಕೊಳ್ಳುವುದು ಬಿಟ್ಟರೆ ರಾಜ್ಯದ ಜನರ ಹಿತ ಬೇಕಾಗಿಲ್ಲ: ಶೋಭಾ ಕರಂದ್ಲಾಜೆ

Update: 2018-06-19 16:41 GMT

ಮೂಡಿಗೆರೆ, ಜೂ.19: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಿತ್ತು. ಅದೇ ಅಭಿವೃದ್ಧಿ ಕಾರ್ಯಗಳು ಮುಂದುವರಿಯಬೇಕೆಂಬ ಆಕಾಂಕ್ಷೆಯಿಂದ ರಾಜ್ಯದ ಜನ ಬಿಜೆಪಿಯತ್ತ ಒಲವು ತೋರಿದ್ದಾರೆ. 120 ಇದ್ದ ಕಾಂಗ್ರೆಸ್ 80ಕ್ಕೆ ಇಳಿದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.  

ಪಟ್ಟಣದ ರೈತಭವನದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅವರು, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಜನರು ಯಾರನ್ನು ತಿರಸ್ಕಾರ ಮಾಡಿದ್ದರೋ ಅವರೇ ಇಂದು ರೆಸಾರ್ಟ್ ರಾಜಕೀಯ ಮಾಡಿ ಆಡಳಿತ ನಡೆಸುತ್ತಿರುವುದು ವಿಪರ್ಯಾಸ. ರಾಜ್ಯದ ಅಭಿವೃದ್ಧಿಯ ಕುರಿತಾಗಿ ಕಿಂಚಿತ್ತೂ ಕಾಳಜಿಯಿಲ್ಲ. ರಾಜ್ಯದಲ್ಲಿ ಎಂದೂ ಕಂಡರಿಯದಂತಹ ಮಳೆಯಿಂದ ಉಂಟಾದ ತೊಂದರೆ ಸಾವು-ಅನಾಹುತಗಳಿಗೆ ಪರಿಹಾರ ನೀಡುವಲ್ಲಿ ಸರಕಾರ ವಿಫಲವಾಗಿದೆ. ಮಂತ್ರಿ ಯಾರಾಗಬೇಕು, ಕುರ್ಚಿ ಹೇಗೆ ಉಳಿಸಿಕೊಳ್ಳಬೇಕೆಂಬ ಯೋಚನೆಯಲ್ಲಿದ್ದಾರೆ. ಇಂಥವರಿಗೆ ಮುಂಬರುವ ಚುನಾವಣೆಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.  

ಬಿಎಸ್‍ಎನ್‍ಎಲ್ ಮೊಬೈಲ್ ಸಂಪರ್ಕ ಹಲವೆಡೆ ದೋಷವಿದ್ದು, ಈ ಬಗ್ಗೆ ಲೋಕಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಮೂಡಿಗೆರೆ-ಕಡೂರು ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ, ಟೆಂಡರ್‍ನವರ ಸಮಸ್ಯೆಯಿಂದ ವಿಳಂಬವಾಗಿದ್ದು, ರೀಟೆಂಡರ್ ಮಾಡಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದ  ಅವರು, ಗುಜರಾತ್ ಸಿಎಂ ಆಗಿದ್ದಾಗ ನರೇಂದ್ರ ಮೋದಿಯವರಿಗೆ ವೀಸಾ ನಿರಾಕರಿಸಿ ಉದ್ಧಟತನ ತೋರಿದ್ದ ಅಮೇರಿಕ, ಮೋದಿ ಪ್ರಧಾನಿಯಾದ ಬಳಿಕ ಹಲವು ಬಾರಿ ಆಹ್ವಾನಿಸುವ ಮೂಲಕ ಭಾರತದ ಶಕ್ತಿ ಏನೆಂದು ಅರಿತುಕೊಂಡಿದೆ ಎಂದು ಹೇಳಿದರು. 

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿ ಗಾಧಿಯಿಂದ ಇಳಿದಿದ್ದು, ಆಘಾತ ತಂದಿದೆ. ಮುಂದೆ ಅವರೇ ಮುಖ್ಯಮಂತ್ರಿಯಾಗಲೇಬೇಕೆಂದು ಪ್ರಾರ್ಥಿಸುತ್ತೇನೆ. ಹಿಂದಿನ 5 ವರ್ಷ, ಈಗಿನ ಮತ್ತು ಮುಂದಿನ ಒಟ್ಟು 15 ವರ್ಷದ ಅಭಿವೃದ್ಧಿ ಕಾರ್ಯ ಮಾಡಬೇಕಾದ ಕರ್ತವ್ಯ ನನ್ನ ಮೇಲಿದೆ. ಈ ಚುನಾವಣೆಯಲ್ಲಿ ನನ್ನ ಪಕ್ಷದ ಕಾರ್ಯಕರ್ತರು ಭಾವನಾತ್ಮಕವಾಗಿ ಬೆರೆತು, ಹೋರಾಟ ಮಾಡಿದ್ದರಿಂದ ಗೆಲುವು ಸಿಕ್ಕಿದೆ. . ವಿರೋಧ ಪಕ್ಷಗಳು ಹಣ ಮತ್ತು ಹೆಂಡದಿಂದ ವ್ಯವಹಾರಿಕ ಹೋರಾಟ ಮಾಡಿದರೂ  ಕ್ಷೇತ್ರದ ಜನರು ನನ್ನ ಕೈ ಹಿಡಿದಿದ್ದಾರೆ. ಮುಂದೆ ಬರುವ ಲೋಕಸಭೆ ಚುನಾವಣೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಶ್ರಮ ಹಾಕಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು. 

ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಈಗಿನ ಸರಕಾರ ಅಲ್ಪದಿನದಾಗಿದ್ದು, ಕಚ್ಚಾಟಗಳು ಪ್ರಾರಂಭವಾಗಿದೆ. ಕುಮಾರಸ್ವಾಮಿ ಅಧಿಕಾರವನ್ನು ಕೆಲವೇ ದಿನದಲ್ಲಿ ಕಳೆದುಕೊಳ್ಳಲಿದ್ದಾರೆ. ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ರೈತರಿಗೆ ವಂಚಿಸಿ ವಚನಭ್ರಷ್ಟರಾಗಿದ್ದಾರೆ. ನೀವು ಮುಂಚೆ ವಚನ ನೀಡುವ ಮುಂಚೆ ರಾಜ್ಯದ ಆರ್ಥಿಕ ಪರಿಸ್ಥಿತಿ ಅರಿವಿರಲಿಲ್ಲವೇ? ಬಿಜೆಪಿ ಯನ್ನು ಸೋಲಿಸಬೇಕೆಂಬ ದೃಷ್ಟಿಯಿಂದ ಮಹಾ ಘಟಬಂಧನ ರಚಿಸಿಕೊಂಡಿದ್ದೀರಿ. ಇದು ದೇಶಕ್ಕೆ ವಂಚನೆ ಮಾಡುವ ಉದ್ದೇಶವಾಗಿದೆ. ಉತ್ತರ ಪ್ರದೇಶವನ್ನು ಕೊಳ್ಳೆ ಹೊಡೆದ ಮುಲಾಯಂ, ಅಕಿಲೇಶ್ ಯಾದವ್, ಕೇರಳದ ಪಿಣರಾಯ್ ವಿಜಯನ್ ಜೊತೆ ಹಾಗೂ ಉಗ್ರಗಾಮಿ ಸಂಘಟನೆಯ ಮಹಮ್ಮದ್ ಹಫೀಜ್‍ನೊಂದಿಗೆ ಕಾಫಿ, ಟಿ ತಿಂಡಿ ಮಾಡುವ ಸಂಪರ್ಕ ಇಟ್ಟುಕೊಂಡಿರುವ ಕಾಂಗ್ರೆಸ್‍ನೊಂದಿಗೆ ಕೈ ಜೋಡಿಸಿರುವ ಜೆಡಿಎಸ್‍ಗೆ ನಾಚಿಕೆಯಾಗಬೇಕು ಎಂದ ಅವರು, ಕಂಚಿನ ಪದಕ ಪಡೆದವರು ಅಧಿಕಾರದ ಗದ್ದಿಗೇರಿದ್ದಾರೆ. ಚಿನ್ನದ ಪದಕ ಗಳಿಸಿದವರು ವಿರೋಧ ಪಕ್ಷದಲ್ಲಿರುವಂತಾಗಿದೆ. ಇನ್ನು 6 ತಿಂಗಳಲ್ಲಿ ಮತ್ತೆ ಚುನಾವಣೆ ನಡೆದು ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು. 

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ದೇಶದ ಅಭಿವೃದ್ಧಿ, ದೇಶ ಕಾಯುವ ಪಕ್ಷ ಒಂದಿದ್ದರೆ ಅದು ಬಿಜೆಪಿ ಪಕ್ಷ. ಹಾಗಾಗಿ ನರೇಂದ್ರ ಮೋದಿ ಅವರ ದೇಶದ ಸ್ವಚ್ಛ ಆಡಳಿತ ಮತ್ತು ದೇಶ ಸೇವೆ ಕ್ಷೇತ್ರದ ಕಾರ್ಯಕರ್ತರ ಪರಿಶ್ರಮ ಮತ್ತು ಹೋರಾಟದಿಂದ ಕ್ಷೇತ್ರದಲ್ಲಿ ಎಂ.ಪಿ.ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನ 5 ವರ್ಷದಲ್ಲಿ ಕಾರ್ಯಕರ್ತರು ಸಾಕಷ್ಟು ನೊಂದಿದ್ದರು. ಅಭಿವೃದ್ಧಿ ಕಾರ್ಯಗಳು ಕುಂಟಿತವಾಗಿತ್ತು. ಆದರೆ ಈ ಬಾರಿ ನಮ್ಮ ಶಾಸಕರು ಗೆದ್ದಿದ್ದರಿಂದ ಒಳ್ಳೆಯ ವಾತಾವರಣ ಸೃಷ್ಠಿಯಾಗಿದೆ ಎಂದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಅನೈತಿಕ ಸಂಬಂಧದೊಂದಿಗೆ ರಾಜ್ಯದಲ್ಲಿ ಸರಕಾರ ರಚಿಸಿ, ಅಧಿಕಾರ ನಡೆಸುತ್ತಿದೆ. ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ದುಂಡುಗ ಪ್ರಮೋದ್ ವಹಿಸಿದ್ದರು. ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಉಪಾಧ್ಯಕ್ಷೆ ಸವಿತಾ ರಮೇಶ್, ಜಿ.ಪಂ. ಸದಸ್ಯರಾದ ಅಮಿತಾ ಮುತ್ತಪ್ಪ, ಸುಧಾ ಯೋಗೇಶ್, ಶಾಮಣ್ಣ,  ತಾ.ಪಂ. ಸದಸ್ಯರಾದ ದೇವರಾಜು, ಸುಂದರ್ ಕುಮಾರ್, ಭಾರತೀ ರವೀಂದ್ರ, ಎಂ.ಆರ್.ಜಗದೀಶ್, ಹಳಸೆ ಶಿವಣ್ಣ, ಎಂ.ಎಲ್.ಕಲ್ಲೇಶ್, ದೀಪಕ್ ದೊಡ್ಡಯ್ಯ, ಅರೆಕುಡಿಗೆ ಶಿವಣ್ಣ, ವಿ.ಕೆ.ಶಿವೇಗೌಡ, ಜೆ.ಎಸ್.ರಘು, ಸಂಪತ್ ಆಲ್ದೂರು, ಕೆಂಜಿಗೆ ಕೇಶವ್, ಬಿ.ಎನ್.ಜಯಂತ್, ಗಜೇಂದ್ರ ಕೊಟ್ಟಿಗೆಹಾರ, ಚಂದ್ರೇಶ್ ಮತ್ತಿತರರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News