×
Ad

ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಶ್ರೀಗಂಧ ಕಳ್ಳತನ ಪ್ರಕರಣ; ಓರ್ವ ಬಂಧನ

Update: 2018-06-19 22:20 IST

ಚಿಕ್ಕಮಗಳೂರು, ಜೂ.19: ಇಲ್ಲಿಗೆ ಸಮೀಪದ ಹಿರೇಗೌಜ ಗ್ರಾಪಂ ವ್ಯಾಪ್ತಿಯಲ್ಲಿನ ಕುರ್ಚೆಗುಡ್ಡ ಮೀಸಲು ಅರಣ್ಯದ ಟಿಸಿ ರೋಡ್ ಎಂಬಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣ ಸಂಬಂಧ ಸಾರ್ವಜನಿಕರು ನೀಡಿದ ಭಾವಚಿತ್ರ ಆಧರಿಸಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಮಂಗಳವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಬೈಕ್‍ನಲ್ಲಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತ ಶ್ರೀಗಂಧ ಚೋರನನ್ನು ಬಿದರಹಳ್ಳಿ ಗ್ರಾಮದ ಅಯ್ಯಪ್ಪ ಎಂದು ಗುರುತಿಸಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಬಿದರಹಳ್ಳಿ ಗ್ರಾಮದ ರಘು ಎಂಬಾತ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಕೈಯಿಂದ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದಾನೆಂದು ತಿಳಿದು ಬಂದಿದೆ. ಪ್ರಕಣರದ ಮತ್ತೋರ್ವ ಆರೋಪಿ ಬಸವರಾಜ್ ತಲೆಮರೆಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. 

ಕಳೆದ ಶನಿವಾರ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಪಂ ವ್ಯಾಪ್ತಿಯಲ್ಲಿರುವ ಕುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ಟೆಂಟ್ ಹಾಕಿಕೊಂಡು ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ದೃಶ್ಯವೊಂದನ್ನು ಸಾರ್ವಜನಿಕರು ಮೊಬೈಲ್‍ನಲ್ಲಿ ಸೆರೆ ಹಿಡಿದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರು ನೀಡಿದ ಭಾವ ಚಿತ್ರ ಹಾಗೂ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ಶ್ರೀಗಂಧ ಚೋರರು ಹಾಕಿಕೊಂಡಿದ್ದ ಟೆಂಟ್ ಸಹಿತ ಆಹಾರ ಸಾಮಾಗ್ರಿಗಳು, ಕತ್ತಿ, ಕೊಡಲಿ, ಬಟ್ಟೆಗಳು ದೊರಕಿದ್ದವೆಂದು ತಿಳಿದು ಬಂದಿದ್ದು, ಈ ಸಂಬಂಧ ತನಿಖೆ ಕೈಗೊಂಡ ಅರಣ್ಯಾಧಿಕಾರಿಗಳಿಗೆ ಆರೋಪಿಗಳು ತಾಲೂಕಿನ ಬಿದರಹಳ್ಳಿ ಗ್ರಾಮದವರೆಂದು ಸುಳಿವು ಸಿಕ್ಕಿತ್ತು ಎನ್ನಲಾಗಿದೆ.

ಈ ಸುಳಿವು ಆಧರಿಸಿ ಮಂಗಳವಾರ ಬೆಳಗ್ಗೆ ಚಿಕ್ಕಮಗಳೂರು ಅರಣ್ಯ ವಿಭಾಗದ ಆರ್‍ಎಫ್‍ಒ ಶಿಲ್ಪಾ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಸಂತ್, ನಾಗೇಂದ್ರ, ನಂದೀಶ್, ವೆಂಕಟೇಶ್ ಬಿದರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಗ್ರಾಮದಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ಆರೋಪಿಗಳಾದ ಅಯ್ಯಪ್ಪ ಹಾಗೂ ರಘು ಎಂಬವರನ್ನು ಬೆನ್ನು ಹತ್ತಿದ್ದ ಸಿಬ್ಬಂದಿ ಬೈಕ್ ಅನ್ನು ಚೇಸ್ ಮಾಡಿ ಇಬ್ಬರನ್ನೂ ಹಿಡಿದಿದ್ದಾರೆ. ಈ ವೇಳೆ ಘಟನೆಯ ಪ್ರಮುಖ ಆರೋಪಿ ರಘು ಎಂಬಾತ ಅರಣ್ಯ ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಮತ್ತೋರ್ವ ಆರೋಪಿ ಅಯ್ಯಪ್ಪನನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ಆತನಿಂದ ಶ್ರೀಗಂಧ ಕಳ್ಳಸಾಗಣೆ ಮಾಡುವ ಜಾಲದ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆನ್ನಲಾಗಿದೆ. ಕಾರ್ಯಾಚರಣೆ ವೇಳೆ ಬಿದರಹಳ್ಳಿ ಗ್ರಾಮದ ಕೆಲ ಕಿಡಿಗೇಡಿಗಳು ಅರಣ್ಯಾಧಿಕಾರಿಗಳು ಮತ್ತು ಮಾಹಿತಿದಾರರಿಗೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. 

ಪ್ರಕಣದಲ್ಲಿ ಇನ್ನೂ ಕೆಲ ಪ್ರಭಾವಿಗಳ ಪಾತ್ರ ಇರುವ ಬಗ್ಗೆ ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಬಂಧಿತನಿಂದ ಅಧಿಕಾರಿಗಳ  ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದ್ದಾರೆಂದು ತಿಳಿದು ಬಂದಿದೆ.

ಕಳೆದ ಶನಿವಾರ ಸಾರ್ವಜನಿಕರು ನೀಡಿದ ಮಾಹಿತಿ, ಭಾವಚಿತ್ರ ಆಧರಿಸಿ ಶ್ರೀಗಂಧ ಕಳ್ಳತನ ಪ್ರಕರಣದಡಿಯಲ್ಲಿ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈ ಪೈಕಿ ಓರ್ವ ನನ್ನು ಬಂಧಿಸಿದ್ದೇವೆ. ರಘು ಎಂಬಾತ ತಪ್ಪಿಸಿಕೊಂಡಿದ್ದು, ಬಸವರಾಜ್ ತಲೆ ಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
- ಶಿಲ್ಪಾ, ಆರ್ ಎಫ್‍ಒ, ಚಿಕ್ಕಮಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News