ಪ್ರವಾಸೋದ್ಯಮ ಅಭಿವೃದ್ಧಿಗಾಗಿ 3 ಸಾವಿರ ಕೋಟಿ.ರೂ ಕ್ರಿಯಾಯೋಜನೆ: ಸಚಿವ ಸಾ.ರಾ.ಮಹೇಶ್
ಮೈಸೂರು,ಜೂ.19: ರಾಜ್ಯದ ಪ್ರವಾಸೋದ್ಯಮ ಕುರಿತು ವಿಶೇಷ ಆಸಕ್ತಿ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೂ.25 ರಂದು ಸಭೆ ಕರೆಯಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೂರು ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ದಪಡಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳು, ಹೋಟೆಲ್ ಮಾಲೀಕರು, ಟ್ರಾವೆಲ್ಸ್ ಸಂಘದ ಮಾಲೀಕರು, ಪ್ರವಾಸಿ ಗೈಡ್ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಕುರಿತು ಮುಖ್ಯಮಂತ್ರಿಗಳು ಹೆಚ್ಚು ಆಸಕ್ತಿ ತೋರಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಅಧಿಕಾರಿಗಳು, ಮತ್ತು ಪ್ರವಾಸೋದ್ಯಮದ ಬಗ್ಗೆ ಕಾಳಜಿ ಹೊಂದಿರುವ ಸಾರ್ವಜನಿಕರ ಸಭೆಯನ್ನು ಕರೆಯಲಾಗಿದೆ. ಆ ಸಭೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದರ ಕುರಿತು ಚರ್ಚೆಯಾಗಲಿದೆ. ಈಗಾಗಲೇ ನಮ್ಮ ಅಧಿಕಾರಿಗಳು ಯಾವ ರೀತಿ ಅಭಿವೃದ್ಧಿಪಡಿಸಬೇಕು ಎಂಬುದರ ಕುರಿತು ಕ್ರಿಯಾಯೋಜನೆ ತಯಾರಿಸಿದ್ದಾರೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿ ಹೊಂದುವುದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಅನೇಕ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅಂತಹವರಿಗೆ ಹೆಚ್ಚು ಅನುಕೂಲವಾಗಲಿದೆ. ಹಾಗೆ ಬಡವರು ಕೂಡ ವ್ಯಾಪಾರ ಅಥವಾ ಇನ್ನಾವುದೋ ಕೆಲಸಗಳನ್ನು ಮಾಡಿಕೊಂಡು ಜೀವನ ಕಟ್ಟಿಕೊಳ್ಳಬಹುದಾಗಿದೆ. ಹಾಗಾಗಿ ಪ್ರವಾಸೋದ್ಯಮಕ್ಕೆ ಹೆಚ್ಚು ಆಸಕ್ತಿ ವಹಿಸಲು ಮುಖ್ಯಮಂತ್ರಿಗಳು ಉತ್ಸುಕರಾಗಿದ್ದಾರೆ ಎಂದು ಹೇಳಿದರು.
ಮೈಸೂರು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಿ: ಸಭೆ ಆಗಮಿಸಿದ್ದ ಶಾಸಕರಾದಿಯಾಗಿ ಸಾರ್ವಜನಿಕರು ಮೈಸೂರು ನಗರಕ್ಕೆ ಹೆಚ್ಚು ಒತ್ತು ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಕರ್ನಾಟಕ ಎಂದರೆ ಮೈಸೂರಿನ ಹೆಸರು ಮೊದಲು ಬರುತ್ತದೆ. ಮೈಸೂರು ಅರಮನೆ ನಗರಿ, ಸಾಂಸ್ಕೃತಿಕ ನಗರಿ, ಧಾರ್ಮಿಕ ನಗರಿ ಎಂದು ಪ್ರಸಿದ್ಧಿ ಪಡೆದಿದೆ. ಮೈಸೂರಿನಲ್ಲಿರುವಷ್ಟು ಪಾರಂಪರಿಕ ಕಟ್ಟಡಗಳು ದೇಶದಲ್ಲಿ ಎಲ್ಲಿಯೂ ಇಲ್ಲ. ಅವುಗಳನ್ನು ಅಭಿವೃದ್ಧಿ ಪಡಿಸಿ ಆಕರ್ಷಣೀಯ ತಾಣಗಳಾಗುವಂತೆ ಮಾಡಬೇಕಿದೆ ಎಂದು ಹೇಳಿದರು.
ಶೌಚಾಲಯ ಮತ್ತು ಪಾರ್ಕಿಂಗ್ ನಿರ್ಮಿಸಿ: ಮೈಸೂರು ನಗರಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಅವರಿಗೆ ಮೂಲಭೂತ ಸೌಕರ್ಯಗಳನ್ನೇ ನಾವು ಮಾಡಿಲ್ಲ, ಅರಮನೆ ಹೊರಗಡೆ, ಮೃಗಾಲಯದ ಬಳಿ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಶೌಚಾಲಯದ ಕೊರತೆ ಇದೆ. ಅದಕ್ಕೆ ಹೆಚ್ಚು ಗಮನಕೊಟ್ಟು ಶೌಚಾಲಯಗಳ ನಿರ್ಮಾಣ ಮಾಡಬೇಕು, ಹಾಗೆ ಪಾರ್ಕಿಂಗ್‍ನ ದೊಡ್ಡ ಸಮಸ್ಯೆ ನಾವು ಎದುರಿಸುತಿದ್ದೇವೆ. ಅರಮನೆ ಬಳಿ, ಮೃಗಾಲಯದ ಬಳಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ. ಹಾಗಾಗಿ ವಾಹನಗಳನ್ನು ಎಲ್ಲಿಬೇಕೆಂದರಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ ಅದನ್ನು ತಪ್ಪಿಸಬೇಕು ಎಂದು ಸಭೆಯಲ್ಲಿ ಬಹುತೇಕರು ಒತ್ತಾಯಿಸಿದರು.
ಮಹಿಳೆಯರಿಗೆ ರಕ್ಷಣೆ ನೀಡಿ: ಪ್ರವಾಸೋದ್ಯಮ ಅಭಿವೃದ್ಧಿಗೆ ಎಷ್ಟು ಆಸಕ್ತಿ ತೋರಿಸುತ್ತೀರೋ ಅಷ್ಟೆ ಮಹಿಳೆಯರ ರಕ್ಷಣೆ ಬಗ್ಗೆಯೂ ಕಾಳಜಿ ವಹಿಸಿ ಎಂದು ಮಹಿಳಾ ಉದ್ಯಮಿ ಛಾಯಾ ನಂಜಪ್ಪ ಒತ್ತಾಯಿಸಿದರು.
ಮೈಸೂರು ನಗರ ಬಿಟ್ಟು ಹೊರ ವರ್ತುಲ ರಸ್ತೆಯಲ್ಲಿ ರಾತ್ರಿ 9 ಗಂಟೆಯಾಯಿತು ಎಂದರೆ ಮಹಿಳೆಯರು ಓಡಾಡುವುದೆ ಕಷ್ಟವಾಗಿದೆ. ಒಂಟಿ ಮಹಿಳೆಯರಂತೂ ಯಾವುದೇ ಕಾರಣಕ್ಕೂ ಹೋಗಲು ಸಾಧ್ಯವಿಲ್ಲ, ಅನೇಕ ದೌರ್ಜನ್ಯಗಳು ಅಲ್ಲಿ ನಡೆಯುತ್ತವೆ. ಅತ್ತ ದಯವಿಟ್ಟು ಗಮನ ಹರಿಸಬೇಕು. ಒಮ್ಮೆ ನನಗೆ ಅದರ ಅನುಭವವಾಗಿದೆ ಎಂದು ಹೇಳಿದರು.
ಪ್ರವಾಸಿ ಪೋಲಿಸರ ಅಗತ್ಯವಿದೆ: ಮೈಸೂರು ನಗರಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಹೊರ ರಾಜ್ಯ ಮತ್ತು ದೇಶಗಳಿಂದ ಬರುತ್ತಾರೆ. ಅವರು ಮೊದಲು ಕೇಳುವುದು ಟ್ರಾಫಿಕ್ ಪೊಲೀಸರನ್ನು. ಆದರೆ ಪೊಲೀಸರಿಗೆ ಸರಿಯಾದ ಮಾಹಿತಿ ಇರುವುದಿಲ್ಲ, ಜೊತೆಗೆ ಕೆಲವರು ಪ್ರವಾಸಿಗರ ಜೊತೆ ಉತ್ತಮ ರೀತಿಯಲ್ಲಿ ಸ್ಪಂಧಿಸುವುದಿಲ್ಲ. ಅಂತಹ ಕಿರಿಕಿರಿಯನ್ನು ತಪ್ಪಿಸಲು ಪ್ರವಾಸಿ ಪೊಲೀಸರನ್ನು ನಿಯೋಜಿಸಬೇಕಿದೆ ಎಂಬ ಅಭಿಪ್ರಾಯ ಕೇಳಿ ಬಂತು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು, ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜು, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ಮೇಯರ್ ಭಾಗ್ಯವತಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮೈಸೂರು ಟ್ರಾವೆಲ್ ಮಾರ್ಟ್ ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು.