ಬಜೆಟ್‍ನಲ್ಲಿ ಸಾಲ ಮನ್ನಾ ಘೋಷಿಸದಿದ್ದರೆ ಉಗ್ರ ಹೋರಾಟ: ಬಿಜೆಪಿ ರೈತ ಮೋರ್ಚಾ

Update: 2018-06-19 17:27 GMT

ತುಮಕೂರು.ಜೂ.19:ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ತಾವು ಮಂಡಿಸುವ ಬಜೆಟ್‍ನಲ್ಲಿ ರೈತರ ಎಲ್ಲಾ ಸಾಲ ಮನ್ನಾ ಮಾಡದಿದ್ದರೆ ಸರಕಾರದ ವಿರುದ್ದ ಬಿಜೆಪಿ ರೈತ ಮೋರ್ಚಾ ರಾಜ್ಯದಲ್ಲಿ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಪವಿತ್ರಾ ರಾಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾಕ್ಕೆ ಯಾವುದೇ ಷರತ್ತು ವಿಧಿಸಿಲ್ಲ. ಅಲ್ಲದೆ ಶ್ರೀಮಂತ, ಸಣ್ಣ, ಅತಿ ಸಣ್ಣ ಎಂಬ ಯಾವುದೇ ವಿಭಾಗ ಮಾಡಿಲ್ಲ. ಆದರೆ ಅಧಿಕಾರ ಸಿಕ್ಕಾಗ ಮಾತ್ರ ಸಣ್ಣ ಹಿಡುವಳಿ, ಅತಿ ಸಣ್ಣ ರೈತರ, ತೆರಿಗೆ ಪಾವತಿಸುವ ರೈತ ಎಂದು ವಿಭಾಗಿಸಲು ಹೊರಟಿದ್ದಾರೆ. ರೈತರಲ್ಲಿಯೇ ತಾರತಮ್ಯ ಮಾಡುವುದು ತಪ್ಪು. ಈ ಬಗ್ಗೆ ಜೂನ್ 19 ರಿಂದ 25 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತ ಮೋರ್ಚಾ ಪ್ರವಾಸ ನಡೆಸಿ, ಜನರಿಗೆ ತಿಳುವಳಿಕೆ ನೀಡಲಿದೆ. ಒಂದು ವೇಳೆ ಬಜೆಟ್‍ನಲ್ಲಿ ತಾವೇ ನೀಡಿರುವ ವಾಗ್ಧಾನದಂತೆ ರೈತರ 1.21 ಲಕ್ಷ ಕೋಟಿ ಸಾಲ ಮನ್ನಾ ಮಾಡದಿದ್ದರೆ ರೈತರೊಂದಿಗೆ ಬೀದಿಗಿಳಿದು ರೈತ ಮೋರ್ಚಾ ಹೋರಾಟ ನಡೆಸಲಿದೆ ಎಂದರು.

ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬ್ಯಾಟರಂಗೇಗೌಡ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಮಣ್ಣು ಆರೋಗ ಪತ್ರ ವಿತರಣೆ, ಸಾವಯವ ಕೃಷಿಗೆ ಉತ್ತೇಜನ, ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ, ಪ್ರಧಾನಮಂತ್ರಿ ತುಂತುರು ಯೋಜನೆ ಸೇರಿದಂತೆ ಹಲವು ಯೋಜನೆಗಳು ರೈತರಿಗೆ ಹೆಚ್ಚಿನ ನೆರವು ಒದಗಿಸಿವೆ. ಆಹಾರ ಭದ್ರತಾ ಯೋಜನೆಯಡಿ ಕಿರು ಧಾನ್ಯ ಬೆಳೆಯಲು ಉತ್ತೇಜಿಸಲಾಗುತ್ತಿದೆ. ಬರ ನಿರ್ವಹಣೆಗಾಗಿ ನೆರವು ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ರಾಜ್ಯ ಸರಕಾರದ ಅಧಿಕಾರಿಗಳು ವಿಫಲರಾಗಿದ್ದಾರೆ. ಆದ್ದರಿಂದ ಕೇಂದ್ರ ಸರಕಾರದ ಯೋಜನೆಗಳನ್ನು ಪಂಚಾಯತ್ ಮಟ್ಟದವರೆಗೆ ತೆಗೆದುಕೊಂಡು ಹೋಗಲು  ವ್ಯಾಪಾಕ ಪ್ರಚಾರದ ಜೊತೆಗೆ, ಅಧಿಕಾರಿಗಳು ಸಕ್ರಿಯರಾಗಿ ಕಾರ್ಯ ನಿರ್ವಹಿಸುವಂತೆ ಒತ್ತಡ ಹೇರಲಾಗುವುದು ಎಂದು ಬ್ಯಾಟರಂಗೇಗೌಡ ತಿಳಿಸಿದರು.

ತುಮಕೂರು ಪುಡ್ ಪಾರ್ಕ್‍ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆಯುತ್ತಿಲ್ಲ ಎಂಬುದು ರೈತ ಮೋರ್ಚಾ ಗಮನಕ್ಕೆ ಬಂದಿದೆ. ಆದರೆ ಸಣ್ಣ ಕೈಗಾರಿಕಾ ಸಚಿವರು ಆರೋಪಿಸಿರುವಂತೆ ಯಾವುದೇ ರಿಯಲ್‍ ಎಸ್ಟೇಟ್ ದಂಧೆ ನಡೆಯುತ್ತಿಲ್ಲ. ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸುವ ಕೆಲವು ಯೂನಿಟ್‍ಗಳು ಕೆಲಸ ಮಾಡುತ್ತಿಲ್ಲ.ಈ ಬಗ್ಗೆ ಮುಂದಿನ ದಿನಗಳಲ್ಲಿ ಮೋರ್ಚಾ ಗಮನಹರಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಜೋತಿ ಗಣೇಶ್, ರಾಜ್ಯ ಉಪಾಧ್ಯಕ್ಷ ಲಿಂಗಮೂರ್ತಿ, ಪದಾಧಿಕಾರಿಗಳಾದ ಸ್ಮಿತಾ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News