ತುಮಕೂರು: ಕಾನೂನು ಸುವ್ಯವಸ್ಥೆ ಕಾಪಾಡಲು ಶಾಸಕರಿಂದ ಮನವಿ

Update: 2018-06-19 17:35 GMT

ತುಮಕೂರು,ಜೂ.19: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಕಳ್ಳತನಗಳು ಹೆಚ್ಚುತಿದ್ದು, ಅದರಲ್ಲಿಯೂ ಹಗಲು ಹೊತ್ತಿನಲ್ಲಿಯೇ ಕಳವು ಪ್ರಕರಣ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ತುಮಕೂರು ನಗರ ಕ್ಷೇತ್ರದ ಶಾಸಕ ಜೋತಿಗಣೇಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ನೀಡಿರುವ ಅವರು, ತುಮಕೂರು ಮಹಾನಗರ ಪಾಲಿಕೆ ಅಥವಾ ಸ್ಮಾರ್ಟ್ ಸಿಟಿ ಕಚೇರಿಯ ಸಿಬ್ಬಂದಿಯೆಂದು ಸುಳ್ಳು ಹೇಳುತ್ತಾ, ವಾಟರ್ ಪೈಪ್ ಲೈನ್, ಯು,ಜಿ,ಡಿ, ಲೈನ್, ವಿದ್ಯುತ್ ಮೀಟರ್ ಪರಿಶೀಲಿಸುವಂತೆ ಬಂದು ಸಾರ್ವಜನಿಕರನ್ನು ದಿಕ್ಕು ತಪ್ಪಿಸಿ, ಕಳ್ಳತನ ಹಾಗೂ ಸರಗಳ್ಳತನ ಮಾಡುತ್ತಿರುವುದು ತಿಳಿದು ಬಂದಿದೆ. ಈ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಸರಕಾರಿ ಅಧಿಕಾರಿಗಳನ್ನು ಅನುಮಾನಾಸ್ಪದವಾಗಿ ನೋಡುವಂತಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ತುಮಕೂರು ಎ.ಪಿ.ಎಂ.ಸಿ ಬಳಿ ಇರುವ ದೇವಸ್ಥಾನದ ಬಳಿ ಹಾಗೂ ನಗರದ ಕೆಲವು ದೇವಸ್ಥಾನ, ಚರ್ಚ್‍ಗಳಲ್ಲಿ ನಿರಂತರವಾಗಿ ಕಳ್ಳತನವಾಗುತ್ತಿದೆ. ತುಮಕೂರು ನಗರ ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರಿಗೆ ಸಮೀಪವಿದ್ದು, ವೇಗವಾಗಿ ಬೆಳೆಯುತ್ತಿರುವ ನಗರವಾಗಿರುತ್ತದೆ. ಈಗ ಇಲ್ಲಿ ಟ್ರ್ರಾಫಿಕ್ ಸಮಸ್ಯೆ ಒಂದೆಡೆಯಾದರೆ, ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಮತ್ತೊಂದೆಡೆ ಕಂಡು ಬರುತ್ತಿದೆ. ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಬೈಕ್ ವಿಲ್ಹಿಂಗ್‍ಗೆ ಕಡಿವಾಣ ಹಾಕಿ: ಕೆಲ ಕಿಡಿಗೇಡಿಗಳು ಶಾಲಾ ಕಾಲೇಜು ಆರಂಭ ಮತ್ತು ಮುಕ್ತಾಯ ವೇಳೆ ಹೆಣ್ಣು ಮಕ್ಕಳ ಗಮನವನ್ನು ತಮ್ಮಡೆ ಸೆಳೆದುಕೊಳ್ಳುವ ಉದ್ದೇಶದಿಂದ ಮಹಿಳಾ ಕಾಲೇಜುಗಳು, ಹೆಣ್ಣು ಮಕ್ಕಳ ಹಾಸ್ಟಲ್, ಜನನಿಬೀಡ ಪ್ರದೇಶಗಳಲ್ಲಿ ಬೈಕ್ ವಿಲ್ಹಿಂಗ್ ನಂತಹ ಅಪಾಯಕಾರಿ ಸ್ಟೆಂಟ್ ಪ್ರದರ್ಶಿಸಿ, ದಾರಿ ಹೋಕರಿಗೆ ತೊಂದರೆ ನೀಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ, ನಂಬರ್ ಪ್ಲೆಟ್ ಇಲ್ಲದ ಇಂತಹ ವಾಹನಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಶಾಸಕರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕೆಲವು ಬಡಾವಣೆಗಳಲ್ಲಿ ರಾತ್ರಿಯ ವೇಳೆ ಸುಖಾ ಸುಮ್ಮನೆ ಬೀದಿ ಸುತ್ತುವ ಪುಂಡರ ಹಾವಳಿಯನ್ನು ತಡೆಗಟುವ ನಿಟ್ಟಿನಲ್ಲಿ ಚಿಕ್ಕಪೇಟೆ, ಗುಬ್ಬಿಗೇಟ್, ಸದಾಶಿವನಗರ, ಭೀಮಸಂದ್ರ, ಸೇರಿದಂತೆ ನಗರದ ಗಡಿ ಪ್ರದೇಶಗಳಲ್ಲಿ ಗಸ್ತು ವಾಹನಗಳನ್ನು ಹಾಕಬೇಕು. ಸರಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ ಮತ್ತು ಸಂಜೆಯ ವೇಳೆ ವಾಕಿಂಗ್ ಮಾಡುವ ಹಿರಿಯ ನಾಗರಿಕರಿಗೆ ಪುಂಡರ ಹಾವಳಿಯಿಂದ ತೊಂದರೆಯಾಗಿದೆ. ಸರಕಾರಿ ಜಾಗಗಳು ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸರು ಹೆಚ್ಚಿನ ನಿಗಾವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 

ತುಮಕೂರು ನಗರ ಗಾಯಿತ್ರಿ ಚಿತ್ರಮಂದಿರದ ಎದುರು ಎಂ,ಜಿ, ರಸ್ತೆಗೆ ದಾರಿ ಕಲ್ಪಿಸುವ ವಿಭಜಕಕ್ಕೆ ಅಡ್ಡಲಾಗಿ ಹಾಕಿರುವ ಕಲ್ಲುಗಳನ್ನು ತೆರವುಗೊಳಿಸಿ ವ್ಯಾಪಾರಿಗಳು ಸುಗಮವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೋಡಬೇಕು. ಈ ಸಂಬಂಧ ಅಧಿಕಾರಿಗಳನ್ನು ಕಳಿಸಿ ಸ್ಥಳ ಪರಿಶೀಲನೆ ಮಾಡಿ ತೆರಿಗೆದಾರರ ಹಿತ ಕಾಪಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಮನವಿ ಸ್ವೀಕರಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ದಿವ್ಯಾಗೋಪಿನಾಥ್, ಟ್ರಾಫಿಕ್ ಸಿಗ್ನಲ್ ಲೈಟ್‍ಗಳನ್ನು ಸರಿ ಪಡಿಸಲು ಮಹಾನಗರ ಪಾಲಿಕೆ ಆಯುಕ್ತರ ಜೊತೆ ಚರ್ಚಿಸಲು, ರೋಡ್ ಹಂಪ್ಸ್‍ಗೆ ಸಂಬಂಧಿಸಿದಂತೆ ಪಿ.ಡಬ್ಲು.ಡಿ, ಇಲಾಖಾ ಅಧಿಕಾರಿಗಳು, ಹಾಗೂ ನಗರದ ಸಮಸ್ಯೆಗಳ ಕುರಿತು ಸಾರ್ವಜನಿಕರು ಒಳಗೊಂಡಂತೆ  ಸಭೆ ಕರೆದು ಸಾಧಕ ಬಾಧಕ ಚರ್ಚಿಸಿ ಆಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರಿಗೆ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News