×
Ad

ತುಮಕೂರು: ಶಿಕ್ಷಕರ ಕೊರತೆ ನೀಗಿಸಲು ಒತ್ತಾಯಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ

Update: 2018-06-19 23:11 IST

ತುಮಕೂರು.ಜೂ.19: ಶತಮಾನ ಕಳೆದ ಶಾಲೆಯೊಂದರಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವಂತೆ ಒತ್ತಾಯಿಸಿ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರು ಮತ್ತು ಮಕ್ಕಳ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ತುಮಕೂರು ನಗರಕ್ಕೆ ಕೂಗಳತೆಯ ದೂರದಲ್ಲಿರುವ ಬೆಳಗುಂಬ ಸರಕಾರಿ ಮಾದರಿ ಪ್ರಾಥಮಿಕ ಶಾಲೆ 1916ರಲ್ಲಿ ಆರಂಭವಾಗಿದ್ದು, ಶತಮಾನ ಪೂರೈಸಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದ್ದರೂ ನಗರಕ್ಕೆ ಹತ್ತಿರವಿರುವ ಈ ಶಾಲೆಯಲ್ಲಿ ಇಂದಿಗೂ 1 ರಿಂದ 7 ತರಗತಿಯವರೆಗೆ ಸುಮಾರು 123 ಮಕ್ಕಳು ಓದುತ್ತಿದ್ದು, ಕೇವಲ ಮೂರು ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಪ್ರಸ್ತುತ ಶಾಲೆಯ ಮುಖ್ಯಶಿಕ್ಷಕರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಇಬ್ಬರು ಮಹಿಳಾ ಶಿಕ್ಷಕರು ಮಾತ್ರ ಕಾರ್ಯನಿರ್ವ ಹಿಸುತ್ತಿದ್ದು, ಇಬ್ಬರಿಂದ ಇಡೀ ಶಾಲೆಯನ್ನು ನಿರ್ವಹಿಸುವುದು ಕಷ್ಟ ಸಾಧ್ಯವಾಗಿದೆ. ಶಾಲೆ ಪ್ರಾರಂಭವಾಗಿ 20 ದಿನ ಕಳೆದರೂ ಸರಿಯಾದ ರೀತಿ ಪಾಠ, ಪ್ರವಚನಗಳು ನಡೆಯುತ್ತಿಲ್ಲ. ಇರುವ ಇಬ್ಬರು ಶಿಕ್ಷಕರಲ್ಲಿ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯದ ಪರಿಕರ ವಿತರಣೆ ಸೇರಿದಂತೆ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿದೆ. ಆದ್ದರಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕವಾಗುವವರೆಗೂ ಶಾಲೆಯ ಬೀಗ ತೆರೆಯಲು ಬಿಡುವುದಿಲ್ಲ ಎಂಬು ಎಸ್.ಡಿ.ಎಂ.ಸಿ ಅಧ್ಯಕ್ಷ ನಿಜಗುಣೇಶ್ ಅವರು ಪತ್ರಿಕೆಗೆ ತಿಳಿಸಿದರು.

7ನೇ ತರಗತಿಯ ವಿದ್ಯಾರ್ಥಿನಿ ಚಂದನ ಪತ್ರಿಕೆಯೊಂದಿಗೆ ಮಾತನಾಡಿ, ತುಮಕೂರು ನಗರ ಹತ್ತಿರವಿದ್ದರೂ ನಮ್ಮ ಊರಿನ ಶಾಲೆ ಎಂಬ ಅಭಿಮಾನದಿಂದ 1ನೇ ತರಗತಿಯಿಂದ ಇದೇ ಶಾಲೆಯಲ್ಲಿ ಕಲಿಯುತ್ತಿದ್ದು, ಕಳೆದ ಒಂದು ವರ್ಷದಿಂದ ಶಾಲೆಯಲ್ಲಿ ಕೇವಲ 3 ಜನ ಶಿಕ್ಷಕರಿದ್ದು, ಇಡೀ ಶಾಲೆಯನ್ನು ನಿರ್ವಹಿಸುವುದು ಕಷ್ಟ. ಎರಡು ಕ್ಲಾಸ್‍ಗಳನ್ನು ಕಂಬೈಂಡ್ ಮಾಡುವುದರಿಂದ ಯಾವ ತರಗತಿಗೆ ಯಾವ ಪಾಠ ಮಾಡುತ್ತಿದ್ದಾರೆ ಎಂಬುದು ತಿಳಿಯುವುದಿಲ್ಲ. ಈಗಾದರೆ ನಾವು ಪಟ್ಟಣದ ಮಕ್ಕಳೊಂದಿಗೆ ಸ್ಪರ್ಧೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಸರಕಾರ ಕೂಡಲೇ ದೈಹಿಕ ಶಿಕ್ಷಕರು ಸೇರಿದಂತೆ 3 ಜನ ಶಿಕ್ಷಕರನ್ನು ನಮ್ಮ ಶಾಲೆಗೆ ವರ್ಗಾವಣೆ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದಳು.

ಎಚ್ಚೆತ್ತು ಕ್ರಮ ಕೈಗೊಂಡ ಶಾಸಕ ಡಿ.ಸಿ.ಗೌರಿಶಂಕರ್: ಶತಮಾನ ತುಂಬಿದ ಶಾಲೆಯೊಂದರ ಮಕ್ಕಳು ಶಿಕ್ಷಕರ ಕೊರತೆ ನೀಗಿಸುವಂತೆ ಪ್ರತಿಭಟನೆಗೆ ಇಳಿದಿರುವ ವಿಷಯ ತಿಳಿದು ಕ್ಷೇತ್ರದ ಪ್ರವಾಸದಲ್ಲಿದ್ದ ಶಾಸಕ ಡಿ.ಸಿ.ಗೌರಿಶಂಕರ್ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸ್ಥಳಕ್ಕೆ ಕರೆಹಿಸಿಕೊಂಡು ಬೆಳಗುಂಬ ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ಸೂಚನೆ ನೀಡಿದ್ದು, ಶಾಸಕರ ಸೂಚನೆಯಿಂದ ತಕ್ಷಣದಿಂದಲೇ ಓರ್ವ ಶಿಕ್ಷಕರನ್ನು ಶಾಲೆಗೆ ನಿಯೋಜಿಸಿದ್ದು, ಬುಧವಾರದಿಂದ ಶಾಲೆಗೆ ಬರಲಿದ್ದಾರೆ. ಉಳಿದ ಶಿಕ್ಷಕರನ್ನು ಸಾಮೂಹಿಕ ವರ್ಗಾವಣೆ ವೇಳೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ಪತ್ರಿಕೆಗೆ ತಿಳಿಸಿದರು.

ಶಾಸಕರು ಶಾಲೆಗೆ ಶಿಕ್ಷಕರನ್ನು ನಿಯೋಜಿಸಿರುವ ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಹಾಕಿದ್ದ ಬೀಗ ತೆಗೆದು ಮಕ್ಕಳಿಗೆ ಪಾಠ, ಪ್ರವಚನ ನಡೆಯಲು ಅವಕಾಶ ನೀಡಿದ್ದು, ಶಾಸಕರು ಮತ್ತು ಅಧಿಕಾರಿಗಳು ತಾವು ನೀಡಿರುವ ಭರವಸೆಯಂತೆ ನಡೆದುಕೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಪೋಷಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News