ಮಂಡ್ಯ: ರೈತರ ಸಾಲಮನ್ನಾಗೆ ಒತ್ತಾಯಿಸಿ ರೈತಸಂಘದಿಂದ ರಸ್ತೆತಡೆ

Update: 2018-06-19 18:07 GMT

ಮಂಡ್ಯ, ಜೂ.19: ರೈತರ ಸಂಪೂರ್ಣ ಸಾಲಮನ್ನಾ, ಬೆಳೆಗಳ ಉತ್ಪನ್ನಗಳಿಗೆ ವ್ಶೆಜ್ಞಾನಿಕ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ರಸ್ತೆತಡೆ ನಡೆಸಿದರು.

ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನಗಳ ತಡೆ ಮಾಡಿದ ಅವರು, ಸರಕಾರದ ವಿರುದ್ಧ ಘೋಷಣೆ ಕೂಗಿ ನುಡಿದಂತೆ ನಡೆಯಬೇಕು ಎಂದು ಒತ್ತಾಯಿಸಿದರು.

ಹಲವು ವರ್ಷಗಳಿಂದ ಮಳೆ ಇಲ್ಲದೆ ಬರದಿಂದ ರೈತರ ಸಂಕಷ್ಟಕ್ಕೆ ಸಿಲುಕಿದ್ದು, ಬ್ಯಾಂಕ್‍ಗಳಲ್ಲಿ 85 ಲಕ್ಷ ರೈತರು ಬ್ಯಾಂಕ್‍ಗಳಿಂದ ಪಡೆದಿರುವ ಸಾಲಮನ್ನಾ ಮಾಡಬೇಕು. ಸಾಲಮನ್ನಾ ಮಾಡದಿದ್ದರೆ ರೈತರ ಆತ್ಮಹತ್ಯೆ ಹೆಚ್ಚಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕಬ್ಬು, ರೇಷ್ಮೆ, ಭತ್ತ, ರಾಗಿ ಮತ್ತು ಹಾಲಿನ ದರ ಕಡಿಮೆಯಾಗಿದ್ದು, ಅನ್ನದಾತ ನಷ್ಟ ಅನುಭವಿಸುತ್ತಿದ್ದಾನೆ. ಆದ್ದರಿಂದ ಉತ್ಪನ್ನಗಳಿಗೆ ವ್ಶೆಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಫಸಲು ಬೀಮಾ ಯೋಜನೆಯಡಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಹಾಲಿ ಇರುವ ಬೆಳೆಗಳು ಒಣಗುತ್ತಿದ್ದು, ಕೆಆರ್‍ಎಸ್ ನೀರಿನಮಟ್ಟ ನೂರಡಿ ದಾಟಿರುವ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಎಲ್ಲಾ ನಾಲೆಗಳಿಗೆ ನೀರು ಹರಿಸಬೇಕು. ಕೆರೆಕಟ್ಟೆಗಳನ್ನು ತುಂಬಿಸಿ ಮುಂದಿನ ಹಂಗಾಮಿನ ಕೃಷಿ ಚಟುವಟಿಕೆಗೆ ನೀರು ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಸರಕಾರಿ ಸ್ವಾಮ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ನಂಬಿ ರೈತರು, ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬದುಕುತ್ತಿದ್ದಾರೆ. ಕೂಡಲೇ ಕಾರ್ಖಾನೆ ಆರಂಭಕ್ಕೆ ಕ್ರಮವಹಿಸಬೇಕು ಮತ್ತು ಕಬ್ಬು ಸರಬರಾಜು ಬಾಕಿ ಹಣ ಪಾವತಿಸಬೇಕು ಎಂದು ಅವರು ತಾಕೀತು ಮಾಡಿದರು.

ಹೇಮಾವತಿ ನಾಲಾ ಅಚ್ಚುಕಟ್ಟು ಪ್ರದೇಶಗಳಿಗೂ ತಕ್ಷಣದಿಂದಲೇ ನೀರು ಹರಿಸಬೇಕೆಂದ ಅವರು, ಕೃಷಿ ವಿಜ್ಞಾನ ಕಾಲೇಜು ತೆರೆಯಲು ಖಾಸಗಿಯವರಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದರು.

ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಜಿಪಂ ಮಾಜಿ ಸದಸ್ಯರಾದ ಕೆ.ಟಿ.ಗೋವಿಂದೇಗೌಡ, ಎ.ಎಲ್.ಕೆಂಪೂಗೌಡ, ಕೋಶಾಧ್ಯಕ್ಷ ಜಿ.ಎಸ್.ಲಿಂಗಪ್ಪಾಜಿ, ಶಿವಳ್ಳಿ ಚಂದ್ರು, ಲತಾ ಶಂಕರ್, ಕೀಲಾರ ಸೋಮಶೇಖರ್, ಹರೀಶ್ ಹಲ್ಲೇಗೆರೆ, ಪಿ.ಕೆ.ನಾಗಣ್ಣ, ಗೊಲ್ಲರದೊಡ್ಡಿ ಅಶೋಕ, ಬಳ್ಳಾರಿಗೌಡ, ರಾಜೇಗೌಡ ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News