ಕೂರ್ಗ್ ಈದ್ ಮೀಟ್ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿ: ದುಬೈನ ಸಾಗರ್ ಫ್ರೆಂಡ್ಸ್ ಚಾಂಪಿಯನ್
ಮಡಿಕೇರಿ, ಜೂ.20: ದುಬೈ ಕೂರ್ಗ್ ಸ್ಪೋಟ್ಸ್ ಕ್ಲಬ್ ವತಿಯಿಂದ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಕೂರ್ಗ್ ಈದ್ ಮೀಟ್ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾವಳಿಯನ್ನು ಈ ವರ್ಷವು ಅತ್ಯಂತ ವಿಜ್ರಂಭಣೆಯಿಂದ ನಡೆಸಲಾಗಿದ್ದು, ದುಬೈನ ಸಾಗರ್ ಫ್ರೆಂಡ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ದುಬೈನ ಆಲ್‍ಕೂಸ್ ಡಲ್ಸ್‍ಕೊ ಹೊನಲು ಬೆಳಕಿನ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕೊಡಗಿನ ವಿವಿಧ ಭಾಗಗಳ 14 ತಂಡಗಳು ಭಾಗವಹಿಸಿ, ನಾಲ್ಕು ತಂಡಗಳು ಸೆಮಿಫೈನಲ್‍ಗೆ ಪ್ರವೇಶಿಸಿದವು. ಮೊದಲನೇ ಪಂದ್ಯದಲ್ಲಿ ದುಬೈನ ಸಾಗರ್ ಫ್ರೆಂಡ್ಸ್ ತಂಡ ಮಡಿಕೇರಿಯ ವಿ.ಆರ್.ವಿ.ಸಿ ತಂಡವನ್ನು ಎದುರಿಸಿತು. ಎರಡನೇ ಸೆಮಿಫೈನಲ್‍ನಲ್ಲಿ ಸಿ.ವೈ.ಸಿ. ಚಾಮಿಯಾಲ್ ತಂಡವನ್ನು ಮಣಿಸಿ ಮೊತ್ತಮೊದಲ ಬಾರಿಗೆ ಫೈನಲ್ ಪ್ರವೇಶಿಸಿತು. ನಂತರ ನಡೆದ ಫೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದ ದುಬೈನ ಸಮೀರ್ ನಾಯಕತ್ವದ ಸಾಗರ್ ಫ್ರೆಂಡ್ಸ್, ಮೊದಲು ಬ್ಯಾಟಿಂಗ್ ಆಯ್ದುಕೊಂಡು ಗರಿಷ್ಟ 5 ಓವರ್ ಗಳಲ್ಲಿ 39 ರನ್ ಗಳಿಸಿತು.
40 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಜಾಸಿ ಪರವಂಡ ನಾಯಕತ್ವದ ತಂಡ 5 ಓವರ್ ಗಳಲ್ಲಿ ಕೇವಲ 26 ರನ್‍ಗಳನ್ನು ಗಳಿಸಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟರೆ, ಪಂದ್ಯಾಟದುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಸಾಗರ್ ಫ್ರೆಂಡ್ಸ್ ತಂಡವು ವಿಜಯ ಪತಾಕೆ ಹಾರಿಸಿತು.
ಕೊಡಗು ಜಿಲ್ಲೆಯ ಅನಿವಾಸಿ ಭಾರತೀಯರು ಜಾತಿ, ಧರ್ಮವನ್ನು ಬದಿಗಿರಿಸಿ ಒಗ್ಗಟ್ಟಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.