ಗುರುವಾರದಿಂದ ಎಸೆಸೆಲ್ಸಿ ಪೂರಕ ಪರೀಕ್ಷೆ

Update: 2018-06-20 13:23 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.20: ಎಸೆಸೆಲ್ಸಿಯ 2017-18 ನೆ ಸಾಲಿನ ಪೂರಕ ಪರೀಕ್ಷೆಗಳು ನಾಳೆಯಿಂದ ಜೂ.28 ರವರೆಗೂ ರಾಜ್ಯದ 673 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಸಾಮಾನ್ಯ ಪರೀಕ್ಷಾ ಕೇಂದ್ರಗಳು 604, ಖಾಸಗಿ ಪರೀಕ್ಷಾ ಕೇಂದ್ರಗಳು 69 ಸೇರಿದಂತೆ ಒಟ್ಟು 673 ಕೇಂದ್ರಗಳಿದ್ದು, ಅದರಲ್ಲಿ 274 ಸರಕಾರಿ ಶಾಲೆಗಳು, 251 ಅನುದಾನಿತ ಶಾಲೆಗಳು ಹಾಗೂ 148 ಅನುದಾನ ರಹಿತ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯಲಿವೆ. 10 ಪರೀಕ್ಷಾ ಕೇಂದ್ರಗಳನ್ನು ಅತಿಸೂಕ್ಷ್ಮ, 17 ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಮತ್ತು 646 ಪರೀಕ್ಷಾಕೇಂದ್ರಗಳನ್ನು ಸಾಮಾನ್ಯ ಪರೀಕ್ಷಾ ಕೇಂದ್ರಗಳು ಎಂದು ಗುರುತಿಸಲಾಗಿದೆ.

ನಾಳೆಯಿಂದ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ನಗರ ಪ್ರದೇಶದಿಂದ 63,735 ಬಾಲಕರು ಮತ್ತು 39,501 ಬಾಲಕಿಯರು ಹಾಗೂ ಗ್ರಾಮೀಣ ಪ್ರದೇಶದಿಂದ 68,821 ಬಾಲಕರು ಮತ್ತು 35,879 ಬಾಲಕಿಯರು ಸೇರಿದಂತೆ ಒಟ್ಟಾರೆಯಾಗಿ 1,32,556 ಬಾಲಕರು ಮತ್ತು 75,380 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.

ಬಿಗಿ ಭದ್ರತೆ: ರಾಜ್ಯಾದ್ಯಂತ ಜಿಲ್ಲಾವಾರು ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಾಲೂಕು ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರನ್ನಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನೇಮಕ ಮಾಡಲಾಗಿದೆ. ಉಪನಿರ್ದೇಶಕರ ಹಂತದಲ್ಲಿ ಶಿಕ್ಷಣಾಧಿಕಾರಿಗಳು ಹಾಗೂ ಉಪ ಯೋಜನಾ ಸಮನ್ವಯಾಧಿಕಾರಿಗಳ ನೇತೃತ್ವದಲ್ಲಿ ಮತ್ತು ಕೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಯನ್ನೊಳಗೊಂಡ ವಿಚಕ್ಷಣ ಜಾಗೃತದಳ ನೇಮಕಾತಿ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಸ್ಥಾನಿಕ ಜಾಗೃತ ದಳ ನೇಮಕಾತಿ ಮಾಡಲಾಗಿದೆ.

ಮೌಲ್ಯಮಾಪನ: ಪರೀಕ್ಷೆಗಳು ಜೂ.28 ರಂದು ಅಂತ್ಯವಾಗಲಿದ್ದು, ಮಾದರಿ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ, ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಬೆಂಗಳೂರು ಉತ್ತರ ಮತ್ತು ದಕ್ಷಿಣ, ಮಂಡ್ಯ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ 54 ವಿಷಯವಾರು ಮೌಲ್ಯಮಾಪನ ಕೇಂದ್ರಗಳನ್ನು ಗುರುತಿಸಿ ಜು.8 ರಿಂದ 12 ರವರೆಗೆ ಮೌಲ್ಯಮಾಪನ ನಡೆಸಲಾಗುತ್ತದೆ.

ವಿಷಯಗಳು: ಜೂ.21 ಗಣಿತ(ಕೋರ್ ಸಬ್ಜೆಕ್ಟ್), ಸಮಾಜಶಾಸ್ತ್ರ, ಜೂ.22 ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ(ಪ್ರಥಮ ಭಾಷೆ), ಜೂ.23 ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್-2, ಎಂಜಿನಿಯರಿಂಗ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ (ಕೋರ್ ಸಬ್ಜೆಕ್ಟ್ ಜೆಟಿಎಸ್ ಅಭ್ಯರ್ಥಿಗಳಿಗೆ ಮಾತ್ರ ಅನ್ವಯ), ಅರ್ಥಶಾಸ್ತ್ರ, ಜೂ.25 ವಿಜ್ಞಾನ(ಕೋರ್ ಸಬ್ಜೆಕ್ಟ್), ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಅಥವಾ ಹಿಂದೂಸ್ಥಾನಿ ಸಂಗೀತ, ಜೂ.26 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಜೂ.27 ಸಮಾಜ ವಿಜ್ಞಾನ (ಕೋರ್ ಸಬ್ಜೆಕ್ಟ್), ಜೂ.28 ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ವಿಷಯಗಳ ಪರೀಕ್ಷೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News