ಬೇರೆಯವರ ಮೇಲೇಕೆ ದಾಳಿ ನಡೆಸುವುದಿಲ್ಲ: ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನೆ
ಬೆಂಗಳೂರು, ಜೂ. 20: ‘ನನಗೆ, ನನ್ನ ಸಂಬಂಧಿಕರು, ಆಪ್ತರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದು, ಇದನ್ನೆಲ್ಲ ಏಕೆ ಮಾಡುತ್ತಿದ್ದಾರೆಂಬುದು ಗೊತ್ತಿದೆ. ಬೇರೆಯವರ ಮನೆಯಲ್ಲಿ ಡೈರಿ, ಲೆಕ್ಕ ಇಟ್ಟಿದ್ದು ಗೊತ್ತಿಲ್ಲವೇ, ಅಂಥವರ ಮೇಲೇಕೆ ದಾಳಿ ನಡೆಸುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಆದಾಯ ತೆರಿಗೆ ಇಲಾಖೆ ನೋಟಿಸ್ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ವಿಚಾರಣೆಗೆ ಹಾಜರಾಗಿ ಎಂದು ಐಟಿ ನನಗೆ ನೋಟಿಸ್ ನೀಡಿದೆ. ಆದರೆ, ಯಾವುದೇ ಸಮನ್ಸ್ ನನಗೆ ಬಂದಿಲ್ಲ ಎಂದು ಸ್ಪಷ್ಟಣೆ ನೀಡಿದರು.
ನಿಮಗೆ (ಮಾಧ್ಯಮದವರು) ಏನು ಅನಿಸುತ್ತದೋ ಅದನ್ನ ಮಾಡಿ. ಅವರಿಗೆ (ಐಟಿಯವರು) ಏನು ಅನ್ನಿಸ್ತದೋ ಅವರು ಮಾಡುತ್ತಾರೆ. ಅಂತಿಮವಾಗಿ ಕಾನೂನು, ನ್ಯಾಯ ಎಲ್ಲವೂ ಇದ್ದು, ಕಾನೂನು ಮೂಲಕ ಹೋರಾಟ ಮಾಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ನಾನು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಐಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದ ಶಿವಕುಮಾರ್, ಈಗ ನಾನೂ ಏನೂ ಮಾತನಾಡುವುದಿಲ್ಲ. ಸೂಕ್ತ ಸಮಯ ಬಂದಾಗ ನಾನೂ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಹೇಳಿದರು.