ಯೋಗ ಸರಕಾರಿ ಕಾರ್ಯಕ್ರಮವಾಗದಿರಲಿ: ವಾಟಾಳ್ ನಾಗರಾಜ್
Update: 2018-06-20 20:10 IST
ಬೆಂಗಳೂರು, ಜೂ.20: ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಅಭ್ಯಾಸ ವಿಧಾನವಾಗಿದೆ. ಇದು ಕೇವಲ ಸರಕಾರಿ ಕಾರ್ಯಕ್ರಮವಾಗದಿರಲಿ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅಭಿಪ್ರಾಯಿಸಿದರು.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಯೋಗ ಪ್ರದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರು ದಿನದ ಒಂದು ಗಂಟೆ ಯೋಗಕ್ಕೆ ಮೀಸಲಿಡುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬೇಕೆಂದು ಆಶಿಸಿದರು.
ನಾನು ಈಜು, ಯೋಗ, ಸೈಕಲ್ ಸವಾರಿ ಮಾಡುವುದರಿಂದ ಉತ್ತಮ ಆರೋಗ್ಯವನ್ನು ರೂಢಿಸಿಕೊಂಡಿದ್ದೇನೆ. ಇಂದಿನ ಆಧುನಿಕ ಯುಗದಲ್ಲಿ ಮಾನಸಿಕ ಒತ್ತಡಗಳು ಸಾಮಾನ್ಯವಾಗಿದ್ದು, ಇದರಿಂದ ಹಲವು ರೋಗಗಳಿಗೆ ತುತ್ತಾಗುವ ಅಪಾಯವಿದೆ. ರೋಗಗಳು ದೇಹವನ್ನು ಆಕ್ರಮಿಸದಂತೆ ತಡೆಯಲು ಯೋಗಾಭ್ಯಾಸ ಉತ್ತಮ ವಿಧಾನವಾಗಿದೆ ಎಂದು ಅವರು ಹೇಳಿದರು.