‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಒಗ್ಗೂಡಿಸಿ ಯೋಜನೆ ಅನುಷ್ಠಾನ: ಆರೋಗ್ಯ ಸಚಿವ ಶಿವಾನಂದ ಪಾಟೀಲ್
ಬೆಂಗಳೂರು, ಜೂ.20: ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಹಾಗೂ ಕೇಂದ್ರ ಸರಕಾರವು ಆಗಸ್ಟ್ 15ರಂದು ಘೋಷಿಸಲಿರುವ ಆಯುಷ್ಮಾನ್ ಭಾರತ್ ಎರಡೂ ಒಂದೇ ಮಾದರಿಯ ಆರೋಗ್ಯ ಯೋಜನೆಗಳಾಗಿದ್ದು, ಇವುಗಳನ್ನು ಒಗ್ಗೂಡಿಸಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಗಳ ಒಗ್ಗೂಡಿಸುವಿಕೆಯಲ್ಲಿ ಗೊಂದಲ ಆಗಬಾರದು ಎಂಬ ಉದ್ದೇಶದಿಂದ ಯಶಸ್ವಿನಿ ಯೋಜನೆಯನ್ನು ಮೂರು ತಿಂಗಳ ಕಾಲ ಮುಂದುವರೆಸಲಾಗಿದೆ ಎಂದರು.
ಆರೋಗ್ಯ ಕರ್ನಾಟಕ ಕಾರ್ಡ್ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಚಾರ ನೀಡಿದ್ದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಪ್ರಮಾಣದಲ್ಲಿ ತಿಳುವಳಿಕೆ ಮೂಡಿಸುವಲ್ಲಿ ಹಿನ್ನಡೆಯಾಗಿದೆ. ಆದುದರಿಂದ, ಐದಾರು ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹೆಚ್ಚಿನ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ ಎಂದು ಶಿವಾನಂದ ಪಾಟೀಲ್ ಹೇಳಿದರು. ರೋಗಿಗಳಿಗೆ ಹೆಚ್ಚಿನ ಲಾಭ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ರಾಜ್ಯದಲ್ಲಿ ಅಂತ್ಯೋದಯ ಕಾರ್ಡುದಾರರಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಅದೇ ರೀತಿ, ಬಿಪಿಎಲ್ ಕಾರ್ಡುದಾರರಿಗೂ ಈ ಯೋಜನೆಗಳ ಲಾಭ ಸಿಗಬೇಕು ಎಂದು ಅವರು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗುವ ಸೇವೆಗಳ ಶುಲ್ಕ ನಿಗದಿ ವಿಚಾರದಲ್ಲಿ ಎಲ್ಲ ಆಸ್ಪತ್ರೆಗಳೊಂದಿಗೆ ಇನ್ನೂ ಒಮ್ಮತ ಮೂಡಿಲ್ಲ. 800 ಆಸ್ಪತ್ರೆಗಳ ಪೈಕಿ 450 ಆಸ್ಪತ್ರೆಗಳು ಶುಲ್ಕ ನಿಗದಿ ವಿಚಾರದಲ್ಲಿ ಒಮ್ಮತಕ್ಕೆ ಬಂದಿವೆ. ಆದರೆ, ಇನ್ನುಳಿದ 350 ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿಲ್ಲ ಎಂದು ಶಿವಾನಂದಪಾಟೀಲ್ ಹೇಳಿದರು.
ಆಸ್ಪತ್ರೆಗಳಿಗೆ ಸಂಬಂಧಿಸಿದ 6 ಸಂಘಟನೆಗಳಿದ್ದು, ಜೂ.27 ಅಥವಾ 28ರಂದು ಅವರೊಂದಿಗೆ ಸಭೆ ನಡೆಸಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ದರ ನಿಗದಿಗೆ ಸಂಬಂಧಿಸಿದಂತೆ ಕೆಪಿಎಂಇ ಕಾಯ್ದೆಯಡಿಯಲ್ಲಿ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದರು.