×
Ad

ವಾಹನಗಳನ್ನು ಮಾರಾಟ ಮಾಡಿ ಕೇಸ್‌ಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ: ಹೈಕೋರ್ಟ್ ಅಭಿಪ್ರಾಯ

Update: 2018-06-20 21:44 IST

ಬೆಂಗಳೂರು, ಜೂ.20: ವಾಹನ ಮಾಲಕರು ತಮ್ಮ ವಾಹನಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ವೇಳೆ ಮಾರಾಟ ಪ್ರಮಾಣ ಪತ್ರ ಹಾಗೂ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ನಕಲು ಪ್ರತಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಒ) ಕಳುಹಿಸಬೇಕು. ಈ ಕೆಲಸ ಮಾಡದೆ ಜನ ಸುಖಾಸುಮ್ಮನೆ ಕ್ರಿಮಿನಲ್ ಕೇಸ್‌ಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ ಎಂದು ಹೈಕೊರ್ಟ್ ಅಭಿಪ್ರಾಯಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಪುಂಜಾಳ್‌ಕಟ್ಟೆ ಠಾಣಾ ಪೊಲೀಸರು ಕುಕ್ಕಳ ಗ್ರಾಮದ ನಿವಾಸಿ ಎನ್.ಪಿ.ಉನ್ನೀಸ್ ವಿರುದ್ಧ ಗಣಿ ಮತ್ತು ಖನಿಜಗಳ ಅಭಿವೃದ್ಧಿ ಕಾಯ್ದೆ (ಎಂಎಂಆರ್‌ಡಿ) ಮತ್ತು ಕರ್ನಾಟಕ ಗಣಿ ಮತ್ತು ಖನಿಜಗಳ ರಿಯಾಯಿತಿ ಕಾಯ್ದೆಯ (ಕೆಎಂಎಂಸಿಆರ್) ವಿವಿಧ ಸೆಕ್ಷನ್‌ಗಳಡಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಈ ಕೇಸ್ ರದ್ದು ಕೋರಿ ಉನ್ನೀಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲ ಎಸ್.ರಾಜಶೇಖರ್ ವಾದ ಮಂಡಿಸಿ, ಅರ್ಜಿದಾರರು 2013ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿದ್ದ ತಮ್ಮ ಜಮೀನನ್ನು ಹಾಗೂ 2016ರಲ್ಲಿ ಲಾರಿಯನ್ನು ಒಬ್ಬರಿಗೆ ಮಾರಾಟ ಮಾಡಿದ್ದರು. ಜಮೀನು ಹಾಗೂ ಲಾರಿ ಖರೀದಿಸಿದವರು ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದರು. ಕಲ್ಲುಗಳನ್ನು ಲಾರಿಗೆ ತುಂಬಿದ್ದ ವೇಳೆ ಪುಂಜಳ್‌ಕಟ್ಟೆ ಠಾಣಾ ಪೊಲೀಸರು ದಾಳಿ ನಡೆಸಿ, ವಾಹನವನ್ನು ವಶಕ್ಕೆ ಪಡೆದಿದ್ದರು. ಲಾರಿಯ ಆರ್‌ಸಿಯು ಅರ್ಜಿದಾರರ ಹೆಸರಿನಲ್ಲಿಯೇ ಇದ್ದ ಕಾರಣ ಅವರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು, ಮಾರಾಟ ಹಾಗೂ ಸರಕು ಕಾಯ್ದೆಯಲ್ಲಿ ಒಂದು ನಿಯಮವಿದೆ. ಅದರ ಪ್ರಕಾರ ವಾಹನವನ್ನು ಮಾರಾಟ ಮಾಡಿದವರು, ಆ ಮಾರಾಟ ಪ್ರಮಾಣಪತ್ರ ಹಾಗೂ ಆರ್‌ಸಿ ನಕಲು ಪ್ರತಿಯನ್ನು ಆರ್‌ಟಿಒಗೆ ಕಳುಹಿಸಬೇಕು. ಆಗ ವಾಹನ ಖರೀದಿಸಿದವರಿಗೆ ಆರ್‌ಟಿಒ ನೋಟಿಸ್ ಕೊಡುತ್ತಾರೆ. ಖರೀದಿದಾರರು ಆರ್‌ಟಿಒ ಕಚೇರಿಗೆ ಹೋದರೆ, ಅವರ ಹೆಸರಿಗೆ ಆರ್‌ಸಿಯನ್ನು ಬದಲಿಸಿ ಕೊಡಲಾಗುತ್ತದೆ. ಅಲ್ಲದೆ, ವಾಹನ ಮಾರಾಟ ಮಾಡಿದವರು ತಮ್ಮ ಬಳಿ ಮಾರಾಟ ಪ್ರಮಾಣ ಪತ್ರ ಹಾಗೂ ಆರ್‌ಸಿಯ ಪ್ರತಿಯೊಂದನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಆದರೆ, ಸಾಮಾನ್ಯವಾಗಿ ಜನ ಈ ಕೆಲಸ ಮಾಡುವುದಿಲ್ಲ. ವಾಹನ ಮಾರಾಟ ಮಾಡಿದಾಗ ಆರ್‌ಟಿಒಗೆ ಮಾರಾಟ ಪ್ರಮಾಣ ಪತ್ರ ಹಾಗೂ ಆರ್‌ಸಿ ನಕಲು ಪ್ರತಿ ಕಳುಹಿಸಿಕೊಡದಿದ್ದರೆ, ಖರೀದಿದಾರರ ಹೆಸರಿಗೆ ಆರ್‌ಸಿ ಬದಲಾಣೆಯಾಗುವುದಿಲ್ಲ. ಆಗ ಮಾರಾಟ ಮಾಡಿದ ವಾಹನಗಳು ಅಪರಾಧ ಪ್ರಕರಣಗಳಲ್ಲಿ ಬಳಸಲ್ಪಟ್ಟರೆ, ಆಗ ಮಾರಾಟಗಾರರ ಮೇಲೆ ಪೊಲೀಸರು ಕೇಸು ದಾಖಲು ಮಾಡುತ್ತಾರೆ. ಇದರಿಂದ ಅವರು ಅನಗತ್ಯವಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಆರ್‌ಸಿ ಬದಲಿಸಿದರೆ ಕೇಸುಗಳನ್ನು ಎದುರಿಸುವುದು ತಪ್ಪುತ್ತದೆ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.

ನಂತರ ಉನ್ನೀಸ್ ಅವರ ಮೇಲೆ ಎಂಎಂಆರ್‌ಡಿ ಹಾಗೂ ಕೆಎಂಎಂಆರ್‌ಸಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ದಾಖಲಿಸಿದ್ದ ಪ್ರಕರಣ ದಾಖಲಿಸಿರುವುದು ಕಾನೂನು ಬಾಹಿರವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಹಾಗೆಯೇ, ಉನ್ನಿಸ್ ವಿರುದ್ಧ ಪ್ರಕರಣ ಮತ್ತದರ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News