×
Ad

ಪ್ರತ್ಯೇಕ ಎರಡು ಪ್ರಕರಣ: ಇಬ್ಬರು ಎಸಿಬಿ ಬಲೆಗೆ

Update: 2018-06-20 21:48 IST

ಬೆಂಗಳೂರು, ಜೂ.20: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಲಂಚ ಸ್ವೀಕಾರ ಆರೋಪದ ಮೇಲೆ ಇಬ್ಬರು ಸರಕಾರಿ ನೌಕರರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಧಾರವಾಡ: ಕಲಘಟಗಿ ತಾಲೂಕಿನ ಗುತ್ತಿಗೆದಾರರೊಬ್ಬರು ನರೇಗಾ ಯೋಜನೆಯಡಿ ಕಾಮಗಾರಿಗಾಗಿ ಕಟ್ಟಡ ಸಾಮಗ್ರಿಗಳನ್ನು ಸರಬರಾಜು ಮಾಡಿರುವ ಬಿಲ್‌ಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ತಾಲೂಕಿನ ಪಂಚಾಯತ್ ಎಕ್ಸಿಕ್ಯೂಟಿವ್ ಶ್ಯಾಮಸುಂದರ್ ಕಾಂಬ್ಳೆ ಎಂಬಾತ ಗುತ್ತಿಗೆದಾರರ ಬಿಲ್ ಮಂಜೂರಾತಿಗಾಗಿ 1.5 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ ಆರೋಪದಡಿ ದೂರು ನೀಡಲಾಗಿತ್ತು.

ಬುಧವಾರ ಕಾರ್ಯಾಚರಣೆ ನಡೆಸಿ ಎಸಿಬಿ ಅಧಿಕಾರಿಗಳು, ಆರೋಪಿ ಶ್ಯಾಮಸುಂದರ್ ಕಾಂಬ್ಳೆ ಲಂಚ ಸ್ವೀಕರಿಸುವಾಗ ದಾಳಿ ನಡೆಸಿ ಪ್ರಕರಣ ಪತ್ತೆಹಚ್ಚಿ, ಧಾರವಾಡ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಅದೇ ರೀತಿ, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿ ನಿವಾಸಿಯೊಬ್ಬರು, ಶಿರಾ ತಹಸೀಲ್ದಾರ ನ್ಯಾಯಾಲಯದಲ್ಲಿ ಖಾತೆ ಬದಲಾವಣೆ ಸಂಬಂಧ ಆದೇಶ ಪ್ರತಿಯನ್ನು ನೀಡಲು ಲಂಚ ಕೇಳಿದ ಆರೋಪದ ಮೇಲೆ ಗ್ರಾಮ ಲೆಕ್ಕಿಗ ಜಯಲಕ್ಷ್ಮೀ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬುಧವಾರ ಎಸಿಬಿ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಜಯಲಕ್ಷ್ಮೀ ವಿರುದ್ಧ ತುಮಕೂರು ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ, ನಗದು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News